ಶ್ರೀರಾಮನ ಬೃಹತ್ ಭಾವಚಿತ್ರ ಮೆರವಣಿಗೆ

ಲಕ್ಷ್ಮೇಶ್ವರ,ಮಾ.19: ಸಮೀಪದ ಶಿಗ್ಲಿಯ ಶ್ರೀರಾಮ ಸೇನೆ ಘಟಕದ ವತಿಯಿಂದ ಶುಕ್ರವಾರ ಶ್ರೀರಾಮನ ಬೃಹತ್ ಭಾವಚಿತ್ರದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಹಳೇ ಬಸ್ ನಿಲ್ದಾಣದಲ್ಲಿ ಶಾಸಕ ರಾಮಣ್ಣ ಲಮಾಣಿ ಮತ್ತು ಬಿಜೆಪಿ ಮುಖಂಡ ಗುರುನಾಥ ದಾನಪ್ಪನವರ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ರಾಮಣ್ಣ ಲಮಾಣಿ ಧರ್ಮ ಸಂಸ್ಥಾಪನೆಗಾಗಿ ಈ ಪುಣ್ಯಭೂಮಿಯಲ್ಲಿ ಮರ್ಯಾದಾ ಪುರುಷೋತ್ತಮನಾಗಿ ಅವತಾರವೆತ್ತಿದ ಶ್ರೀ ರಾಮ ಸಾಕ್ಷಾತ್ ಪರಶಿವನೇ ಆಗಿದ್ದಾನೆ. ಶ್ರೀರಾಮನ ಸ್ಮರಣೆ ಸನ್ಮಾರ್ಗ, ಜೀವನ್ಮುಕ್ತಿಗೆ ದಾರಿದೀಪವಾಗಿದೆ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವಂತೆ ಯುವಕರು ಧರ್ಮ ರಕ್ಷಣೆಗಾಗಿ ಮುಂದಾಗಬೇಕು. ಅದಕ್ಕಾಗಿ ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆಯ ಗುಣವೂ ಬೇಕು ಎಂದರು.
ಶಿರಹಟ್ಟಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಗುರುನಾಥ ದಾನಪ್ಪನವರ ಮಾತನಾಡಿ, ಶ್ರೀರಾಮ ಕೇವಲ ವ್ಯಕ್ತಿಯಲ್ಲ ಪ್ರತಿಯೊಬ್ಬರ ಬದುಕಿನ ಆದರ್ಶವೇ ಆಗಿದ್ದಾರೆ. ಭಕ್ತಿ, ಶೃದ್ಧೆ, ಸತ್ಯ, ಶಾಂತಿ, ಪ್ರೀತಿ, ಸಹೋಧರತ್ವ ಸದ್ಗುಣಗಳ ಸಂಕೀರ್ಣತೆಯಿಂದ ಕೂಡಿದ ದೇವತಾ ಮನುಷ್ಯ ಶ್ರೀರಾಮ. ಪ್ರತಿಯೊಬ್ಬ ಮನುಷ್ಯ ಧರ್ಮ, ಸಂಸ್ಕಾರ, ಮಾನವೀಯತೆ, ಕರ್ತವ್ಯಪ್ರಜ್ಞೆಗಳನ್ನು ರೂಡಿಸಿಕೊಂಡು ಸಾರ್ಥಕ ಜೀವನ ಹೊಂದಬೇಕು ಎಂಬುದನ್ನು ಸಾಕ್ಷಿಕರಿಸಿದ್ದಾನೆ. ನಮ್ಮ ಸಮಾಜ, ಧರ್ಮ, ಸಂಸ್ಕøತಿ, ದೇಶದ ಪ್ರಗತಿಗೆ ಪೂರಕವಾಗಿ ನಡೆದುಕೊಳ್ಳಬೇಕು ಇದಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಅಭಿಮಾನ, ಸ್ವಾಭಿಮಾನ ಮೆರೆಯಬೇಕು ಎಂದು ಹೇಳಿದರು.
ಶ್ರೀರಾಮನ 11 ಅಡಿ ಎತ್ತರದ ಸುಂದರ ಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮಾರ್ಗದುದ್ದಕ್ಕೂ ಶ್ರೀರಾಮಸೇನೆಯ ಕಾರ್ಯಕರ್ತರ ‘ಪ್ರಭು ಶ್ರೀರಾಮಕಿ ಜೈ’ ಎಂಬ ಘೋಷಣೆಗಳು ಮುಗಿಲು ಮುಟ್ಟಿತ್ತು. ಮೆರವಣಿಗೆಯಲ್ಲಿ ಪುನೀತರಾಜಕುಮಾರ ಅವರ ಪುಣ್ಯಸ್ಮರಣೆ ನಿಮಿತ್ತ ಅವರ ಭಾವಚಿತ್ರಗಳು ರಾರಾಜಿಸಿದ್ದವು.
ಈ ವೇಳೆ ಶ್ರೀರಾಮಸೇನೆಯ ಶಿಗ್ಲಿ ಘಟಕದ ಅಧ್ಯಕ್ಷ ಮೌನೇಶ ತಳವಾರ, ಸಿದ್ದಣ್ಣ ಎಲಿಗಾರ, ಸೋಮಣ್ಣ ಡಾಣಗಲ್ಲ, ಡಿ.ವೈ. ಹುನಗುಂದ, ವೀರಣ್ಣ ಪವಾಡದ, ಮಂಜುನಾಥ ಬದಿ, ಕೃಷ್ಣ ಬಿದರಳ್ಳಿ, ಶಂಭು ಹುನಗುಂದ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ಪ್ರವೀಣ ಹುಲಗೂರ, ಮಲ್ಲೇಶ ಹಂಜಿ, ಮಂಜುನಾಥ ಹೊಗೆಸೊಪ್ಪಿನ, ಅಶೋಕ ಶಿರಹಟ್ಟಿ, ನೀಲಪ್ಪ ಹತ್ತಿ, ವಿನೋದ ಎಲಿಗಾರ,ನವೀನ ಹಿರೇಮಠ, ಸದಾನಂದ ನಂದೆಣ್ಣವರ, ವಿಶಾಲ ಬಟಗುರ್ಕಿ ಸೇರಿದಂತೆ ನೂರಾರು ಕಾರ್ಯಕರ್ತರರಿದ್ದರು.