ಶ್ರೀರಾಮನ ಆದರ್ಶಗಳು ಸರ್ವರಿಗೂ ಅನುಸರಣೀಯ: ಡಾ| ಮೋಹನ ಆಳ್ವ

ಕಾರ್ಕಳ : ‘ಶ್ರೀರಾಮಚಂದ್ರನ ಜೀವನದ ಆದರ್ಶಗಳು ಸರ್ವರಿಗೂ ಅನುಸರಣೀಯ. ದೇವರಾಗಿ, ಪ್ರಜಾವತ್ಸಲ ರಾಜನಾಗಿ, ಪುರುಷೋತ್ತಮನಾಗಿ, ನೊಂದವರ ಕಣ್ಣೀರು ಒರೆಸುವ ದಯಾಳುವಾಗಿ, ದುಷ್ಟ ಶಕ್ತಿಗಳನ್ನು ಸಂಹರಿಸಿ ಶಿಷ್ಟರನ್ನು ಕಾಪಾಡಿದ ಭಗವಂತ ಅವತಾರಿಯಾಗಿ ವಿವಿಧ ಮುಖಗಳಿಂದ ನಾವು ರಾಮನನ್ನು ಕಾಣುತ್ತೇವೆ. ಸಾಹಿತಿ, ಗುರು ಅಂಬಾತನಯ ಮುದ್ರಾಡಿಯವರು “ಶ್ರೀರಾಮದರ್ಶನ” ಕೃತಿಯ ಮೂಲಕ ಶ್ರೀರಾಮನ ಹಿರಿದಾದ ದರ್ಶನವನ್ನು ನಮಗೆ ಮೂಡಿಸಿದ್ದಾರೆ’ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ರೂವಾರಿ ಡಾ. ಎಂ. ಮೋಹನ ಆಳ್ವ ಅಭಿಪ್ರಾಯಪಟ್ಟಿದ್ದಾರೆ.
ಅವರು ಅಕ್ಟೋಬರ್ ೨೫, ಭಾನುವಾರ ಬಜಗೋಳಿಯ ಮಾರುತಿ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಆವರಣದಲ್ಲಿ ಕಾರ್ಕಳ ಹೊಸಸಂಜೆ ಪ್ರಕಾಶನ ಪ್ರಕಟಿತ ಅಂಬಾತನಯ ಮುದ್ರಾಡಿ ರಚಿಸಿದ “ಶ್ರೀರಾಮದರ್ಶನ” ಕೃತಿ ಲೋಕಾರ್ಪಣೆಗೈದು ಮಾತನಾಡಿದರು.
‘ಅಂಬಾತನಯ ಮುದ್ರಾಡಿಯವರ ಸಾಹಿತ್ಯಲೋಕದ ಸುದೀರ್ಘ ಪ್ರಯಾಣ ಪರಿಶ್ರಮದ ಫಲವಾಗಿ ಈ ಉನ್ನತ ಕೃತಿ ಮೂಡಿಬಂದಿದೆ. ಅಂಬಾತನಯರ ಬರೆಹ ಬಾಲಕರಿಂದ ವೃದ್ಧರವರೆಗೆ, ಪಾಮರರಿಂದ ಪಂಡಿತರವರೆಗೂ ತಲುಪಬಲ್ಲ ಕಸುವಿನಿಂದ ಕೂಡಿದೆ’ ಎಂದು ಅವರು ನುಡಿದರು.
ಜಾನಪದ ವಿದ್ವಾಂಸ, ಶ್ರೀಮದ್ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಅರುಣ್‌ಕುಮಾರ್ ಎಸ್. ಆರ್. ಕೃತಿಯ ಕುರಿತು ಮಾತನಾಡಿ ‘ಅಂಬಾತನಯ ಮುದ್ರಾಡಿಯವರು ಅಹಲ್ಯಾ, ಕೈಕೇಯಿ, ತಾರಾ, ಮಂಡೋದರೀ, ಸೀತಾ ಎಂಬ ಐದು ಪುರಾಣ ಪಾತ್ರಗಳನ್ನು ಶ್ರೀರಾಮದರ್ಶನಕ್ಕೆ ಯಶಸ್ವಿಯಾಗಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅಯೋಧ್ಯೆಯಿಂದ ಲಂಕೆಯವರೆಗಿನ – ಲಂಕೆಯಿಂದ ಅಯೋಧ್ಯೆವರೆಗಿನ ಸಮಗ್ರ ರಾಮಾಯಣ ಕತೆಯನ್ನು ಈ ಐದು ಪಾತ್ರಗಳ ಮೂಲಕವೆ ಗೀತರೂಪಕಗಳ ಸಂಕಲನ ದ್ವಾರಾ ಶ್ರೀರಾಮದರ್ಶನವನ್ನು ಮಾಡಿಸಿದ್ದಾರೆ’ ಎಂದರು.
ಕೃತಿಕಾರ ಅಂಬಾತನಯ ಮುದ್ರಾಡಿಯ ವರು ಮಾತನಾಡಿ ‘ಶ್ರೀರಾಮದರ್ಶನ ಕೃತಿ ರಚನೆಗೆ ಹೊರಗಿನ ಪ್ರೀತಿಯ ಒತ್ತಡವೇ ಕಾರಣ. ಸನ್ಮಿತ್ರರ, ಅಭಿಮಾನಿಗಳ, ಬಂಧುಗಳ ಆಸಕ್ತ ಸಾಹಿತ್ಯಾಸಕ್ತರ ಪ್ರೀತಿಯ ಒತ್ತಡ ಬಂದಾಗಲೆಲ್ಲ ನಾನು ಅದಕ್ಕೆ ಸ್ಪಂದಿಸುವುದು ನನ್ನ ಸ್ವಭಾವ. ಈ ಸ್ವಭಾವವೇ ನನ್ನನ್ನು ಸಾಹಿತ್ಯಲೋಕದಲ್ಲಿ ನಡೆದಾಡಿಸಿದೆ’ ಎಂದರು.
ಹಿರಿಯ ಪತ್ರಕರ್ತ ಕೆ. ಪದ್ಮಾಕರ ಭಟ್ ಈದು ಹೊಸ್ಮಾರು ಪ್ರಸ್ತಾವನೆಗೈದರು.
ಉದ್ಯಮಿಗಳಾದ ರವೀಂದ್ರ ಶೆಟ್ಟಿ ಬಜಗೋಳಿ, ಕೂಷ್ಮಾಂಡಿನಿ ಉದ್ಯಮ ಸಂಸ್ಥೆಯ ಮಹಾವೀರ ಜೈನ್, ಮಾರುತಿ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಪ್ರಶಾಂತ ಶೆಟ್ಟಿ, ಹೊಸಸಂಜೆ ಪ್ರಕಾಶನದ ಆರ್. ದೇವರಾಯ ಪ್ರಭು ಉಪಸ್ಥಿತರಿದ್ದರು.
ವೈಷ್ಣವಿ ಭಟ್ ಪ್ರಾರ‍್ಥಿಸಿದರು. ಶ್ರೀಮದ್ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಮಾಲತಿ ಪೈ ಕಾರ‍್ಯಕ್ರಮ ನಿರ್ವಹಿಸಿದರು. ಎಸ್.ವಿ.ಟಿ