ಶ್ರೀರಾಮನಗರದಲ್ಲಿ ರೈತರ ಕಾಲುವೆ ಹೂಳೆತ್ತುವ ಕಾಮಗಾರಿ ಪರಿಶೀಲನೆ


ಸಂಜೆವಾಣಿ ವಾರ್ತೆ
ಗಂಗಾವತಿ, ಮೇ.23: ನರೇಗಾ ಕೂಲಿಕಾರರು ತಮಗೆ ನಿಗದಿ ಪಡಿಸಿದ ಪ್ರಮಾಣದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ತಾಪಂ ಇಓ ಮಹಾಂತಗೌಡ ಪಾಟೀಲ್ ಅವರು ಹೇಳಿದರು.
ತಾಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ರೈತರ ಕಾಲುವೆ ಹೂಳೆತ್ತುವ ಕಾಮಗಾರಿಯನ್ನು ಸೋಮವಾರ ವೀಕ್ಷಣೆ ಮಾಡಿ ಮಾತನಾಡಿದರು.
ಉದ್ಯೋಗ ಖಾತರಿ ಯೋಜನೆಯಡಿ ವರ್ಷಕ್ಕೆ 100 ದಿನ ದುಡಿಯಲು ಅವಕಾಶ ಇದೆ. ಜೊತೆಗೆ ಕಾಮಗಾರಿ ಸ್ಥಳದಲ್ಲೇ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದರು.
ನರೇಗಾ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಆಸ್ತಿಗಳ ಸೃಜನೆಯಾಗುತ್ತಿವೆ. ಶಾಲಾ ಕಾಮಗಾರಿಗಳು, ಫಲಾನುಭವಿಗಳಿಗೆ ಜಾನುವಾರು, ಕುರಿ, ಕೋಳಿ ಶೆಡ್ ನಿರ್ಮಿಸಿಕೊಳ್ಳಲು ನರೇಗಾದಡಿ ಅವಕಾಶ ಇದೆ. ಅರ್ಹ ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷರಾದ ಕೆ.ಶ್ರೀಲಕ್ಷ್ಮೀ, ಗ್ರಾಪಂ ಪಿಡಿಓ ವತ್ಸಲಾ, ತಾಪಂ ಎಸ್ ಬಿಎಂ ವಿಷಯ ನಿರ್ವಾಹಕರಾದ ಭೀಮಣ್ಣ, ತಾಂತ್ರಿಕ ಸಂಯೋಜಕರಾದ ಬಸವರಾಜ ಜಟಗಿ, ತಾಂತ್ರಿಕ ಸಹಾಯಕರಾದ ಮಹೇಶ,  ಗ್ರಾಪಂ ಸಿಬ್ಬಂದಿಗಳು ಇದ್ದರು.
ಬಸವನದುರ್ಗಾದಲ್ಲಿ ಆರೋಗ್ಯ ತಪಾಸಣೆ ಶಿಬಿರ : ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸವನದುರ್ಗಾದಲ್ಲಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಉದ್ಯೋಗ ಖಾತರಿ ಯೋಜನೆ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಬಸವನದುರ್ಗಾ ಗ್ರಾಮದ ಸಿಎಚ್ ಓ ಮಂಜುನಾಥ, ನರೇಗಾ ಕೂಲಿಕಾರರಿಗೆ ಅಸಂಕ್ರಾಮಿಕ ರೋಗಗಳ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ. ಕೂಲಿಕಾರರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು.  ಏನಾದರೂ ರೋಗಗಳು ಇದ್ದರೆ ಮುಂಜಾಗ್ರತೆಯಾಗಿ ಚಿಕಿತ್ಸೆ ಪಡೆಯಲು ಸಹಕಾರಿ ಆಗುತ್ತದೆ. ಬಿ.ಪಿ, ಶಗುರ್, ಕ್ಷಯರೋಗ ಸೇರಿ ಇತರೆ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದರು. ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ ಅವರು ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ದಿನಕ್ಕೆ 316 ರೂ. ಕೂಲಿ ಇದ್ದು, ವರ್ಷಕ್ಕೆ ಒಂದು ಕುಟುಂಬ 100 ದಿನಗಳ ವರೆಗೆ ಕೆಲಸ ಮಾಡಬಹುದು. ವೈಯಕ್ತಿಕ ಹಾಗೂ ಸಮುದಾಯಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಇದೆ ಎಂದರು. ಕೆಎಚ್ ಪಿಟಿ ತಾಲೂಕು ಸಂಯೋಜಕರಾದ ಶರಣಬಸವ, ಆನೆಗೊಂದಿ ಗ್ರಾಪಂ ಕಾರ್ಯದರ್ಶಿ ಹನುಮವ್ವ, ಸಿಬ್ಬಂದಿಗಳಾದ ಸತೀಶ, ರಾಘವೇಂದ್ರ, ಕಾಯಕ ಬಂಧುಗಳು, ಕೂಲಿಕಾರರು ಇದ್ದರು.