ಶ್ರೀರಾಮದಾಸರ 79 ನೇ ಆರಾಧನೆ ನಿಮಿತ್ಯ ವಿಚಾರ ಸಂಕಿರಣ

ಬೀದರಃಜ.9: ಶರಣ ಮತ್ತು ದಾಸ ಸಾಹಿತ್ಯಗಳೆರಡಕ್ಕೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಆಗ್ರ ಸ್ಥಾನವಾಗಿದೆ. ಶರಣರು ಮತ್ತು ದಾಸರು ಧಾರ್ಮಿಕ ಮತ್ತು ತಾತ್ವಿಕ ದೃಷ್ಟಿಯಿದ ಮಾತ್ರವಲ್ಲ, ಸಾಮಾಜಿಕವಾಗಿಯೂ ತೊಡಗಿಸಿಕೊಂಡು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದರು ಎಂದು ಸೇಡಂನ ದಾಸ ಸಆಹಿತ್ಯ ವಿದ್ವಾಂಶರಾದ ಡಾ. ವಾಸುದೇವ ಅಗ್ನಿಹೋತ್ರಿ ನುಡಿದರು.

ಅವರು ಶ್ರೀ ರಾಮದಾಸರ 79 ನೇ ಆರಾಧನೆ ನಿಮಿತ್ಯವಾಗಿ ಬೀದರಿನ ಕುಂಬಾರವಾಡಾ ರಸ್ತೆಯಲ್ಲಿರುವ ಕರುನಾಡು ಸಾಂಸ್ಕøತಿಕ ಭವನದಲ್ಲಿ ಹಮ್ಮಿಕೊಂಡ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ದಿಕ್ಸೂಚಿ ಭಾಷಣ ಮಾಡುತ್ತಾ ಜಗತ್ತಿನ ಚಿಂತನಶೀಲರಿಗೆ ದಾಸರು ಒಂದು ಉಪಯುಕ್ತವಾದ ಸಾಹಿತ್ಯವನ್ನು ಧಾರೆ ಎರೆದಿದ್ದಾರೆ. ಅಂತಹ ಸಾಹಿತ್ಯ ಜನಸಾಮನ್ಯರಿಗೆ ತಲುಪಿಸುತಿರುವ ಪರಿಷತ್ತಿನ ಕಾರ್ಯ ಶ್ಲಾಘನೀಯವೆಂದು ನುಡಿದರು.

ಬೀದರಿನ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರಾದ ಶ್ರೀ ದೇವಿದಾಸ ಜೋಶಿ ಶ್ರೀ ರಾಮದಾಸರ ಜೀವನ ವೃತ್ತಾಂತ ಕುರಿತು ಮಾತನಾಡುತ್ತಾ ಶ್ರೀ ರಾಮದಸಾಸರು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜೋಳದಹೆಡಿಗೆ ಗ್ರಾಮದಲ್ಲಿ ಪಿಂಜಾರ ಕುಟುಂಬದ ಖಾಜಾಸಾಹೇಬ ಪೀರಮ್ಮ ದಂಪತಿಗಳ ಮಗ ಬಡೇಸಾಹೇಬರು, ಇವರು ಬಾಲ್ಯದಿಂದಲೇ ಧರ್ಮ ಸಹಿಷ್ಣುಯಾಗಿದ್ದು, ಸರ್ವ ಧರ್ಮದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತಿದ್ದರು. ಇವರ ಜೀವನದಲ್ಲಿ ಸಮಾಜದಿಂದ ಬಂದ ನಿಂದನೆ ಮತ್ತು ಅಪಹಾಸ್ಯದಿಂದ ಬೇಸತ್ತು. ಶ್ರೀರಾಮ ಅಂಕಿತದೊಂದಿಗೆ ಶ್ರೀರಾಮದಾಸರಾಗಿ ಸಮಾಜಕ್ಕೆ ಜ್ಞಾನೋಕ್ತಿಯನ್ನು ದಯಪಾಲಿಸಿ, ಲಿಂಗದಳ್ಳಿ ಗ್ರಾಮದಲ್ಲಿ ಶ್ರೀರಾಮನಲ್ಲಿ ಐಕ್ಯರಾದರೆಂದು ವಿವರಿಸಿದರು.

ಬೀದರಿನ ಸಾಹಿತಿಗಳಾದ ಶಿವಲಿಂಗ ಹೇಡೆ ಶ್ರೀ ರಾಮದಾಸರ ಸಾಹಿತ್ಯ ಮತ್ತು ಪ್ರಸ್ತುತತೆ ಕುರಿತು ಮಾತನಾಡುತ್ತ ರಾಮದಾಸರ ಕೀರ್ತನೆಗಳು ಸಮಾಜದಲ್ಲಿನ ಸಮಸ್ಯೆಗಳನ್ನು ಸಶಕ್ತವಾಗಿ ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಅವರು ಸಮಾಜದಲ್ಲಿನ ಅಂಕು ಡೊಂಕುಗಳನ್ನು ನಿರ್ಭಿಡೆಯಾಗಿ ಎತ್ತಿ ತೋರಿಸುತ್ತಾ ಸಮಾಜವನ್ನು ಸನ್ಮಾರ್ಗದತ್ತ ಕೊಂಡೋಯ್ಯಲು ಪ್ರಯತ್ನಿಸಿದರು. ಅವರ ಕೀರ್ತನೆಗಳಲ್ಲಿ ಸಾಮಾಜಿಕ ವಿಡಂಬನೆ, ಸ್ತ್ರೀ ಸಮಾನತೆ, ಪರಿಶುದ್ಧ ಭಕ್ತಿ, ಪ್ರಸ್ತಾಪಿಸುತ್ತಾ ಆರೋಗ್ಯಯುಕ್ತ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಿದರು ಎಂದು ನುಡಿದರು.

ಬೀದರಿನ ನ್ಯಾಯವಾದಿಗಳಾದ ಶ್ರೀ ರಾಮರಾವ ಗಂಗನಪಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವೈಚಾರಿಕತೆಯ ಭರದಲ್ಲಿ ಜೀವನ ಮೌಲ್ಯ ಮತ್ತು ಸಂಸ್ಕಾರವನ್ನು ಕಳೆದುಕೊಳ್ಳುತ್ತಿರುವ ಸಮಾಜದಲ್ಲಿ ಭಕ್ತಿ ಪಂಥದ ಸಾಹಿತ್ಯ ದಿವ್ಯಾಮೃತವಾಗಿದೆ. ದ್ವೈತ-ಅದ್ವೈತ-ವಿಶಿಷ್ಠಾದ್ವೈತ ಸಿದ್ಧಾಂತದಡಿ ರಚನೆಗೊಂಡ ಭಕ್ತಿ ಸಾಹಿತ್ಯ ಜನರಲ್ಲಿ ದೈವಭಕ್ತಿ ಮೂಡಿಸುವದರೊಂದಿಗೆ ಅಂತರಂಗದ ಕದ ತೆರೆಯಿಸಿ ಸಜ್ಜನರಾಗಿ ಜೀವನ ನಡೆಸಲು ಪ್ರೇರೇಪಿಸುತ್ತದೆ ಎಂದರು.

ಅಖಿಲ ಭರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ರವೀಂದ್ರ ಲಂಜವಾಡಕರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ದಾಸರು ನಿರ್ಮಲ ಭಕ್ತಿ ಜೊತೆಗೆ ಜನರ ಬದುಕಿಗೆ ಅಗತ್ಯವಿರುವ ಜೀವನ ಮೌಲ್ಯ ಸಾಮರಸ್ಯ ಮತ್ತು ಸಹಬಾಳ್ವೆಯ ಸಂದೇಶವನ್ನು ನೀಡಿದ್ದಾರೆ. ಹರಿದಾಸರು ಭಕ್ತಿಗೆ ಕೊಟ್ಟಂತೆ ಮಹತ್ವ ಬದುಕಿಗೂ ನೀಡಿದ್ದಾರೆ. ಅವರ ಮೌಲ್ಯಯುತ ಸಾಹಿತ್ಯವನ್ನು ಜನರ ಮನ ಮನೆಗಳಿಗೆ ತಲುಪಿಸುವ ಕಾರ್ಯ ನಿರಂತರ ನಡೆಸಲಾಗುವುದು ಎಂದರು.

ಆಧುಕಿನ ಹರಿದಾಸರಾದ ಡಾ. ರಾಮಚಂದ್ರ ದಾಸ ಹಾಗೂ ಶ್ರೀ ಸಂಪ್ರದಾಯ ಸೇವಾ ಸಮಿತಿಯ ನಿರೀಕ್ಷಕರಾದ ಪಾಂಚಾಳ ದೀಲಿಪಕುಮಾರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದರು. ಶ್ರೀ ವೈಜಿನಾಥ ಬಾಬಶೆಟ್ಟಿ, ಕು. ಸೃಜನ್ಯ ಅತಿವಾಳೆ, ಹಾಗೂ ಕು. ಭವಾನಿ ಪಾಂಚಾಳ ಅವರಿಂದ ಕೀರ್ತನ ಗಾಯನ ನಡೆಯಿತು. ಮಹೆಬೂಬ ಉಸ್ತಾದ ನಿರೂಪಣೆ ಮಾಡಿದರು. ಸ್ವಾಗತವನ್ನು ರಾಮಶೆಟ್ಟಿ ಐನೋಳೆ ಮಾಡಿದರು. ಕೊನೆಯಲ್ಲಿ ಶಿವಶರಣ ಜಾಪಾಟೆ ವಂದಿಸಿದರು.