ಶ್ರೀರಾಮಚಂದ್ರನ ಆದರ್ಶ ಜೀವನ ನಮ್ಮೆಲ್ಲರಿಗೆ ಪ್ರೇರಣೆ : ನಟರಾಜ ಹಿರೇಮಠ

ಅಥಣಿ :ಏ.18: ಪ್ರಜೆಗಳ ಯೋಗಕ್ಷೇಮವೇ ಶ್ರೀರಾಮನ ಮುಖ್ಯ ಧ್ಯೇಯವಾಗಿತ್ತು. ದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು, ಯಾರಿಗೂ ಅನ್ಯಾಯ ಆಗಬಾರದು, ಜನಸಾಮಾನ್ಯನ ಅಭಿಪ್ರಾಯಕ್ಕೂ ಮನ್ನಣೆ ಸಿಗಬೇಕು ಮುಂತಾದ ಹಲವಾರು ಆದರ್ಶಗಳು ಶ್ರೀರಾಮನ ಆಡಳಿತದ ಭಾಗವಾಗಿತ್ತು. ಹೀಗಾಗಿಯೇ ರಾಮರಾಜ್ಯ ಪರಿಕಲ್ಪನೆ ಎಂಬುದು ಇಡೀ ಜಗತ್ತು ಮೆಚ್ಚುವಂತಹ ಆದರ್ಶ ಆಡಳಿತವಾಗಿದೆ ಎಂದು ಮಾಜಿ ಪುರಸಭಾ ಸದಸ್ಯ ನಟರಾಜ ಹಿರೇಮಠ ಹೇಳಿದರು.
ಅವರು ಅಥಣಿ ಪಟ್ಟಣದ ಶಂಕರನಗರ ಶ್ರೀ ವೀರಂಜನೇಯ ಮತ್ತು ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ರಾಮನವಮಿ ಕಾರ್ಯಕ್ರಮದ ನಿಮಿತ್ಯ ಪ್ರಭು ಶ್ರೀರಾಮಚಂದ್ರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದರು.
ಹಿಂದುಗಳ ಆರಾಧ್ಯ ದೈವ ಶ್ರೀ ರಾಮಚಂದ್ರ ಒಬ್ಬ ಆದರ್ಶ ಪುರುಷ, ಅವರ ಜೀವನದ ಆದರ್ಶಗಳು ನಮ್ಮೆಲ್ಲರಿಗೆ ಪ್ರೇರಣೆಯಾಗಬೇಕು. ಅವರ ಜನ್ಮದಿನವನ್ನು ಆಚರಿಸುವ ಮೂಲಕ ನಮ್ಮೆಲ್ಲರ ಜೀವನದಲ್ಲಿ ಅವರ ಆದರ್ಶವನ್ನು ಅನುಸರಿಸಲು ಪ್ರಯತ್ನಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಎಸ್ ಎಸ್ ಹೂಟಿ, ವಿಠ್ಠಲ ಪರ್ವತಿ , ರವಿ ಕೋಟಿ, ಆರ್ ಬಿ ಚೌಗುಲ, ತಾಯಪ್ಪ ಕೋತ, ಮಲ್ಲಪ್ಪ ಗಟ್ಟನಟ್ಟಿ, ಸಚಿನ್ ಅವಟಿ, ಬಿ ಎಂ ಮಗದುಮ, ಮಂಜುನಾಥ ಹುಲಕುಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.