ಶ್ರೀಮದುತ್ತರಾದಿ ಮಠದಿಂದ ಕೋವಿಡ್ ಪೀಡಿತರಿಗೆ ನರಸಿಂಹ ಪ್ರಸಾದ ವಿತರಣೆ

ವಿಜಯಪುರ, ಮೇ.27-ಕೊರೋನಾ ಮಹಾಮಾರಿಯು ಎಲ್ಲಡೆಗೆ ಹರಡುತ್ತಿರುವ ಇಂದಿನ ವಿಷಮ ಸ್ಥಿತಿಯಲ್ಲಿ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀಮದುತ್ತರಾದಿ ಮಠಾಧೀಶ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಮಹಾ ಮಾರಿ ಮಾರಣ ಅಭಿಯಾನವನ್ನು ತೀವ್ರಗತಿಯಲ್ಲಿ ಆರಂಭಿಸಿದ್ದರು.
ಕೋವಿಡ್ ಪೀಡಿತ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅವರಿಗೆ ಶ್ರೀಮಠದಲ್ಲಿ ತಯಾರಾದ ಶುಚಿ-ರುಚಿಯಾದ, ದೇವರಿಗೆ ಸಮರ್ಪಿಸಿದ ಪ್ರಸಾದವನ್ನು ಉಚಿತವಾಗಿ ತಲುಪಿಸಿ ಅವರು ಬೇಗ ಗುಣಮುಖರಾಗಲು ಪ್ರಾರ್ಥಿಸಿ ಪ್ರಯತ್ನಿಸುವ ಉದ್ದೇಶದ ನರಸಿಂಹ ಪ್ರಸಾದ ಯೋಜನೆ ಜಾರಿಗೊಳಿಸಲಾಗಿತ್ತು.
ವಿಜಯಪುರ ನಗರದಲ್ಲಿ ಈ ಪ್ರಾಂತದ ಹೆದ್ದೈವನಾದ ಸಕಲ ರೋಗ ನಾಶಕನಾದ ತೊರವೆಯ ನರಸಿಂಹಸ್ವಾಮಿಯ ಹೆಸರಿನಲ್ಲಿ ಈ ಯೋಜನೆ ಚಾಲನೆ ನೀಡಲಾಗಿತ್ತು. ಈ ಯೋಜನೆ ಅಡಿಯಲ್ಲಿ ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಡೆದ ಹೆಗಡೇವಾರ್ ಆಸ್ಪತ್ರೆ (ಕೇಂದ್ರೀಯ ವಿದ್ಯಾಲಯ ಹತ್ತಿರ ಟಕ್ಕೆ ರೋಡ) ಯಲ್ಲಿ ನಿತ್ಯ ಪ್ರಸಾದವನ್ನು ಉಚಿತವಾಗಿ ತಲುಪಿಸಲಾಗುತ್ತಿತ್ತು.
ಪಂಡಿತ ಮಧ್ವಾಚಾರ್ಯ ಮೊಕಾಶಿ ಇವರ ಮಾರ್ಗದರ್ಶನದಲ್ಲಿ ಶ್ರೀಮಠದ ಆಡಳಿತ ಮಂಡಳಿಯ ಸಹಯೋಗದಲ್ಲಿ ಈ ಕಾರ್ಯವು ನರಸಿಂಹ ಜಯಂತಿಯವರೆಗೆ ವಿಶೇಷವಾಗಿ ನಡೆದ ಈ ಯೋಜನೆಗೆ ಶ್ರೀಮಠದ ಅನೇಕ ಭಕ್ತರು ಸಹಾಯ ಹಸ್ತ ನೀಡಿದ್ದರು.
ನಿತ್ಯವೂ ಶುದ್ಧ ಭೋಜನದ ವ್ಯವಸ್ಥೆ ಮಾಡುವ ಹೊಣೆಯನ್ನು ಮುಕುಂದ ಮಿರ್ಜಿ ಹಾಗೂ ಅವರ ತಂಡ ವಹಿಸಿ ಕೊಂಡಿತ್ತು. ನಿತ್ಯವೂ ನೂರಕ್ಕೆ ಕಡಿಮೆಯಾಗದಂತೆ ಭೋಜನದ ಪ್ಯಾಕೆಟ್‍ಗಳನ್ನು ಎರಡು ಹೊತ್ತು ಡಯಟ್ ಚಾರ್ಟನ ಅನು ಸಾರವಾಗಿ ಸಿದ್ಧಪಡಿಸಿ ರೋಗಿಗಳಿಗೆ ಮುಟ್ಟಿಸಲಾಗುತ್ತಿತ್ತು. ಮಠದಿಂದ ಆಸ್ಪತ್ರೆಗೆ ಭೋಜನವನ್ನು ಮುಟ್ಟಿಸುವ ಕಾರ್ಯವನ್ನು ಆರ್‍ಎಸ್‍ಎಸ್‍ನ ಸ್ವಯಂ ಸೇವಕರಾದ ರಾಕೇಶ್‍ಕುಲಕರ್ಣಿ, ವಿಜಯ ಜೋಶಿ, ಗೋಪಾಲ ಜೋಶಿ ಮುಂತಾದವರು ವಹಿಸಿ ಕೊಂಡಿದ್ದರು.
ಸಂತೋಷದ ವಿಷಯವೆಂದರೆ ಈ ಹನ್ನೆರಡು ದಿನಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ಇನ್ನೊಂದು ವಿಶೇಷವೆಂದರೆ ಇಷ್ಟು ದಿನಗಳಲ್ಲಿ ಆ ಆಸ್ಪತ್ರೆಯಲ್ಲಿ ಸಾವುಗಳು ಸಂಭವಿಸಿಲ್ಲ. ಎಲ್ಲ ರೋಗಿಗಳು ಹಾಗೂ ಅಲ್ಲಿಯ ಸಿಬ್ಬಂದಿ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥಯತೆ ಭಾವನೆ ಅಭಿವ್ಯಕ್ತ ಪಡಿಸಿದ್ದಾರೆ. ಈ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆದದ್ದು ಮನಸ್ಸಿಗೆ ಮುದತಂದಿದೆ ಎಂದು ಮಠಾಧಿಕಾರಿ ಪಂಡಿತ ಪ್ರದ್ಯುಮ್ನಾ ಚಾರ್ಯ ಪೂಜಾರ ಹೇಳುತ್ತಾರೆ