ಶ್ರೀಮಠದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

ಸೈದಾಪುರ:ನ.23:ಗಡಿ ಭಾಗದ ಭಕ್ತರ ಆಧ್ಯಾತ್ಮೀಕ ತಾಣವಾದ ಸಿದ್ಧಲಿಂಗೇಶ್ವರ ಶ್ರೀಮಠದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಲುಬುರಗಿ ಸಂಸದ ಡಾ.ಉಮೇಶ ಜಾದವ್ ಭರವಸೆ ನೀಡಿದರು.
ಸಮೀಪದ ಬೋರಬಂಡಾ ಗ್ರಾಮದ ಗುಡ್ಡದ ತಪ್ಪಲಿನಲ್ಲಿರುವ ಸಿದ್ಧಲಿಂಗೇಶ್ವರ ಭೇಟಿ ನೀಡಿ ಮಾತನಾಡಿದ ಅವರು, ಹಿಂದೂ ಧಾರ್ಮಿಕ ಪರಂಪರೆಯ ಮಠ ಮಂದಿರಗಳ ಅಭಿವೃದ್ಧಿಗಾಗಿ ಸೂಕ್ತ ಅನುದಾನ ಒದಗಿಸುವ ಮೂಲಕ ಪ್ರಗತಿಗೆ ಶ್ರಮಿಸಲಾಗುವುದು ಎಂದರು. ನಿಸರ್ಗದ ಮಡಿಲಲ್ಲಿ ಇರುವ ಶ್ರೀ ಮಠದ ಪಕ್ಕದಲ್ಲಿಯೇ ಬೃಹದಾಕಾರದ ಭಾವಿ ವರ್ಷದುದ್ದಕ್ಕೂ ತುಂಬಿರುತ್ತಿರುವುದು ಅತ್ಯಂತ ವಿಶೇಷ. ಸದರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಾಟು ಮಾಡುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಹಾಗೂ ತಮ್ಮ ಸಂಸದರ ಅನುದಾನ ಬಳಸಿ ಪ್ರಗತಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಸಿದ್ಧಲಿಂಗೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಶ್ರೀಮಠದ ಪೀಠಾಧಿಪತಿಗಳು ಆಗಿರುವ ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು, ಸದರಿ ಸ್ಥಳದ ವೈಶಿಷ್ಟ್ಯತೆಯ ಕುರಿತು ಸಂಸದರಿಗೆ ಮನವರಿಕೆ ಮಾಡಿಕೊಟ್ಟರು.