ಶ್ರೀಮಂತ ಅವಟಿ ಅವರು ಸಾವಿರಾರು ಶಿಷ್ಯರಿಗೆ ಬೆಳಕಾಗಿದ್ದಾರೆ

ಬಸವನಬಾಗೇವಾಡಿ:ಅ.9: ಸಂಗೀತ ಎಲ್ಲರ ಬದುಕಿಗೆ ನೆಮ್ಮದಿ ತರುವಂತಹುದು. ದಿ.ಶ್ರೀಮಂತ ಅವಟಿ ಅವರು ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಅವರ ಹೆಸರಿನಲ್ಲಿ ಸಂಗೀತ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಕಾಖಂಡಕಿಯ ಗುರುದೇವಾಶ್ರಮದ ಶಿವಯೋಗೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಶ್ರೀಮಂತ ಅವಟಿ ಲಲಿತಕಲಾ ಪ್ರತಿಷ್ಠಾನದಿಂದ ದಿ.ಶ್ರೀಮಂತ ಅವಟಿ ಅವರ ಶಿಷ್ಯ ಬಳಗದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಿ.ವಿದ್ವಾನ್ ಶ್ರೀಮಂತ ಅವಟಿ ಯುವ ಸಂಗೀತ ಪುರಸ್ಕಾರ ಹಾಗೂ ಸುಗಮ ಸಂಗೀತ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶ್ರೀಮಂತ ಅವಟಿ ಅವರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಸಂಗೀತ ಸಂಯೋಜನೆಗಳು ನಮ್ಮೊಂದಿಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಸಂಗೀತ ಕಲಾವಿದ ರಾಘವೇಂದ್ರ ಬಿಜಾಡಿ ಮಾತನಾಡಿ, ದಿ.ಶ್ರೀಮಂತ ಅವಟಿ ಅವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿದೆ. ನೇರ ನುಡಿ, ಶಿಸ್ತುಬದ್ದ ಜೀವನದೊಂದಿಗೆ ಇತರರಿಗೆ ಮಾದರಿಯಾಗಿದ್ದರು. ಅವರು ಅಂಧ ಕಲಾವಿದರಾಗಿದ್ದರೂ ಸಾವಿರಾರೂ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ.
ಅವರು ಸಂಯೋಜಿಸಿದ ಗೀತೆಗಳನ್ನು ನಾಡಿಗೆ ಪರಿಚಯಿಸುವ ಕೆಲಸ ಅವರ ಶಿಷ್ಯ ಬಳಗ ಮಾಡಬೇಕಿದೆ. ಮುಂಬರುವ ದಿನಗಳಲ್ಲಿ ಅವರ ಜೀವನ ಸಾಧನೆ ಕುರಿತು ಪ್ರತಿಷ್ಠಾನದ ಮೂಲಕ ಪುಸ್ತಕ ರಚನೆಯಾಗಬೇಕು. ಆ ಕಾರ್ಯಕ್ಕೆ ನಾನು ಕೈಜೋಡಿಸುವೆ ಎಂದು ಹೇಳಿದರು.

ಸ್ಥಳೀಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ .ಶ್ರೀಮಂತ ಅವಟಿ ಅವರ ಹಾಡುಗಳು ನಮ್ಮೊಂದಿಗಿವೆ. ಅವರಿಗೆ ಕಣ್ಣಿಲ್ಲದಿದ್ದರೂ ಅವರೊಂದಿಗೆ ಒಂದು ಸಾರಿ ಮಾತನಾಡಿ ಮತ್ತೆ ಹತ್ತು ವರ್ಷದ ನಂತರ ಭೇಟಿಯಾದರೂ ಅವರ ಮಾತಿನಿಂದಲೇ ಗುರುತಿಸುವ ಶಕ್ತಿ ಶ್ರೀಮಂತ ಅವಟಿ ಅವರಲ್ಲಿತ್ತು. ಯುವ ಸಂಗೀತ ಕಲಾವಿದರನ್ನು ಪೆÇ್ರೀತ್ಸಾಹಿಸುವ ಕಾರ್ಯ ನಿರಂತರವಾಗಿ ಇಂತಹ ವೇದಿಕೆ ಮೂಲಕ ನಡೆಯಬೇಕು ಎಂದು ಹೇಳಿದರು.

ದಿ.ವಿದ್ವಾನ್ ಶ್ರೀಮಂತ ಅವಟಿ ಯುವ ಸಂಗೀತ ಪ್ರಶಸ್ತಿ ಪುರಸ್ಕ್ರತ ಸೌಮ್ಯ ಪತ್ತಾರ. ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ತಳೇವಾಡ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸಂಗಮೇಶ ಪೂಜಾರಿ ಮಾತನಾಡಿದರು.
ವಿದ್ವಾನ್ ಶ್ರೀಮಂತ ಅವಟಿ ಲಲಿತಕಲಾ ಪ್ರತಿಷ್ಠಾನದ ಅಧ್ಯಕ್ಷ ಶಂಕರ ಅವಟಿ, ಕಾರ್ಯದರ್ಶಿ ರಶ್ಮೀ ಶ್ರೀಮಂತ ಅವಟಿ ಇದ್ದರು.
ಬಸವರಾಜ ಅವಟಿ ಸ್ವಾಗತಿಸಿದರು, ಯುವರಾಜ ಮಾದನಶೆಟ್ಟಿ ನಿರೂಪಿಸಿದರು, ಅಶೋಕ ಹಂಚಲಿ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಗಾಯಕರಾದ ದರ್ಶನ, ಶ್ರೀಕಾಂತ ಕ್ವಾಟಿ, ಸೌಮ್ಯ ಪತ್ತಾರ, ಶಿವಲೀಲಾ ಹೊಸಪೇಟೆ ಅವರ ಗಾಯನ ಕೇಳುಗರನ್ನು ಮಂತ್ರಮುಗ್ದಗೊಳಿಸಿತು.