ಶ್ರೀಮಂತರು ತಮ್ಮ ಮಕ್ಕಳನ್ನು ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿ: ಶ್ರೀಗಳು


ಸಂಜೆವಾಣಿ ವಾರ್ತೆ
ಕೊಟ್ಟೂರು, ಮೇ.11: ಬಡವರು, ನಿರ್ಗತಿಕರು ಮಾತ್ರ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುತ್ತಾರೆ ಎಂಬುದು ತಪ್ಪು ಕಲ್ಪನೆ, ನಾವೆಲ್ಲರೂ ಸಮಾನರು ಎಂಬುದರ ಸಂಕೇತವಿದು. ಇಲ್ಲಿ ಎಲ್ಲಾ ವರ್ಗದವರ ಆಶೀರ್ವಾದ ಈ ನವಜೋಡಿಗಳಿರುವುದಲ್ಲದೆ ಭಗವಂತನ ಕೃಪೆಯೂ ಈ ಜೋಡಿಗಳಿರುತ್ತದೆ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
  ಡೋಣೂರು ಚಾನುಕೋಟಿ ಮಠದಲ್ಲಿ ಬಸವೇಶ್ವರ ಜಯಂತಿ ಹಾಗೂ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಶುಕ್ರವಾರ ಶಿವದೀಕ್ಷೆ ಮತ್ತು ಸಾಮೂಹಿಕ ವಿವಾಹದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
 ಸಿರಿವಂತರು ತಮ್ಮ ಮಕ್ಕಳನ್ನು ಇಂತಹ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಬೇಕು ಎಂದು ತಿಳಿಸಿದರು.
ಕಳೆದ ಮೂರು ದಶಕಗಳಿಂದಲೂ ಡೋಣೂರು ಚಾನುಕೋಟಿ ಮಠ ಸಾಮಾಜಿಕ ಪರಿವರ್ತನೆ, ಸಾಮೂಹಿಕ ವಿವಾಹ, ಆರೋಗ್ಯ ತಪಾಸಣೆ, ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವೆಂದು ಉಜ್ಜಿನಿ ಪೀಠದ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
೪೧ ಜಂಗಮ ವಟುಗಳಿಗೆ ಶಿವದೀಕ್ಷೆ ನೀಡಲಾಯಿತು.
೯ ಜೋಡಿಗಳು ನವದಾಂಪತ್ಯಕ್ಕೆ ಪಾದಾರ್ಪಣೆ ಮಾಡಿದರು. ಡೋಣೂರು ಚಾನುಕೋಟಿ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಂಗಳೂರಿನ ವಿಭೂತಿ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ ನೂತನ ಜೋಡಿಗಳಿಗೆ ಆಶೀರ್ವಚನ ನೀಡಿದರು.
 ಈ ಸಂದರ್ಭದಲ್ಲಿ ಕೂಡ್ಲಿಗಿ ಹೀರೆಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ನಂದಿಪುರದ ಚರಂತೇಶ್ವರ ಸ್ವಾಮೀಜಿ, ಚಾಪಿ ಚಂದ್ರಪ್ಪ, ಕರಡಿಕೊಟ್ರಯ್ಯ, ಅಡಕಿ ಮಂಜುನಾಥ್ ಮುಂತಾದವರಿದ್ದರು.