ಶ್ರೀನಿವಾಸ ಸರಡಗಿ ಸೀಮಾಂತರದಲ್ಲಿ ಅಪರಿಚಿತ ವ್ಯಕ್ತಿ ಕೊಲೆ

ಕಲಬುರಗಿ,ಏ.26-ತಾಲ್ಲೂಕಿನ ಶ್ರೀನಿವಾಸ ಸರಡಗಿ ಸೀಮಾಂತರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಗುರುತು ಸಿಗದಂತೆ ಮುಖ ಸುಟ್ಟು ಹಾಕಿದ ಘಟನೆ ನಡೆದಿದೆ.
30 ರಿಂದ 35 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿ ನಂತರ ತೊಗರಿ ಕಟ್ಟಿಗೆ ಹಾಕಿ ಮುಖ ಸುಟ್ಟು ಹಾಕಲಾಗಿದೆ. ಕೊಲೆಯಾದ ವ್ಯಕ್ತಿಯ ಮುಖ ಮತ್ತು ಕುತ್ತಿಗೆ ಮೇಲೆ ಚಾಕುವಿನಿಂದ ಇರಿದ ಗಾಯಗಳಿದ್ದು, ಕೊಲೆಯಾದ ಸ್ಥಳದಲ್ಲಿ ಮದ್ಯದ ಬಾಟಲಿಗಳು ದೊರೆತಿವೆ ಎನ್ನಲಾಗಿದೆ. ಪಾರ್ಟಿ ಮಾಡಿದ ನಂತರ ಯಾವುದೋ ವಿಷಯಕ್ಕೆ ಜಗಳ ನಡೆದು ಕೊಲೆ ನಡೆದಿರಬಹುದು. ನಂತರ ಗುರುತು ಪತ್ತೆಯಾಗದಂತೆ ಮಾಡುವ ಉದ್ದೇಶದಿಂದ ಮುಖದ ಮೇಲೆ ತೊಗರಿ ಕಟ್ಟಿಗೆ ಹಾಕಿ ಬೆಂಕಿ ಸುಟ್ಟು ಹಾಕಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಲೆಯಾದ ವ್ಯಕ್ತಿ ಮತ್ತು ಕೊಲೆ ಮಾಡಿದವರು ಯಾರು ಎಂಬುವುದಿನ್ನೂ ಪತ್ತೆಯಾಗಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.