ಶ್ರೀನಿವಾಸ ಪ್ರಸಾದ್‍ರಂತಹ ಧೀಮಂತರು ಈಗಿಲ್ಲ: ರಾಜು ಆಲಗೂರ ತೀವ್ರ ಕಳವಳ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.29:ವಿ.ಶ್ರೀನಿವಾಸ್ ಪ್ರಸಾದ ಅವರು ಒಬ್ಬ ಧೀಮಂತ ಹಾಗೂ ಜನಾನುರಾಗಿ ನಾಯಕರಾಗಿದ್ದರು ಎಂದು ಕಾಂಗ್ರೆಸ್‍ನ ಲೋಕಸಭೆ ಅಭ್ಯರ್ಥಿ ರಾಜು ಆಲಗೂರ ಅವರು ಹೇಳಿದರು.
ಸೋಮವಾರ ಬೆಳಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಭಾವುಕರಾಗಿ ಮಾತನಾಡಿ, ಅವರೊಂದಿಗಿದ್ದ ತಮ್ಮ ಸಂಬಂಧವನ್ನು ಮೆಲುಕು ಹಾಕಿದರು.
ಹಿಂದುಳಿದ ವರ್ಗದ ಹಿತ ಕಾಪಾಡಿದವರು ಶ್ರೀನಿವಾಸ್ ಪ್ರಸಾದ. ನಮಗೆ ಅವರು ದನಿಯಾಗಿದ್ದವರು. ಅವರೊಂದಿಗೆ ನನಗೆ ಉತ್ತಮ ಸಂಬಂಧವಿತ್ತು. ಅವರೊಬ್ಬ ಶ್ರೇಷ್ಠ ಸಂಸದೀಯ ಪಟುವಾಗಿದ್ದರು. ಮೊದಲ ಸಲ ನಾನು ಬಳ್ಳೊಳ್ಳಿ ಕ್ಷೇತ್ರದಲ್ಲಿ ನಿಂತಾಗ ನನ್ನ ಜತೆ ಶಕ್ತಿಯಾಗಿದ್ದರು. ಬಡವರು, ಅಲ್ಪಸಂಖ್ಯಾತರ ಪರ ಅವರ ಕಳಕಳಿ ಅಪಾರವಾಗಿತ್ತು. ಅಂತಹ ನಾಯಕ ಈಗ ಯಾರೂ ಇಲ್ಲ. ಹಿಂದೆ ನಮ್ಮೂರಿಗೆ ಕರೆಸಿ ಅವರಿಂದ ಭಾಷಣ ಮಾಡಿಸಿದ್ದೆ. ಚಳವಳಿಯ ದಿನಗಳಿಂದ ಜಿಲ್ಲೆಯಲ್ಲಿ ನಾನವರಿಗೆ ಒಡನಾಡಿಯಾಗಿದ್ದೆ. ಆರು ಸಲ ಸಂಸದರಾಗಿ, ಶಾಸಕರಾಗಿ ಅವರು ಜನಪರವಾಗಿ ದುಡಿದಿದ್ದಾರೆ ಎಂದು ಆಲಗೂರ ಅವರು ಹೇಳಿದರು.

ಪಿಂಜಾರಾ ಸಮುದಾಯ ಬೆಂಬಲ
ಪಿಂಜಾರಾ ಹಾಗೂ ನದಾಫ್ ಸಮಾಜ ಬಾಂಧವರು ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂರಾರು ಜನ ಭಾಗವಹಿಸಿದ್ದರು. ನಮ್ಮ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. ನಮ್ಮ ಏಳ್ಗೆಗಾಗಿ ಉತ್ತಮ ಅಭ್ಯರ್ಥಿಯಾದ ಆಲಗೂರರಿಗೆ ಬೆಂಬಲಿಸುತ್ತಿರುವುದಾಗಿ ಹೇಳಿದರು. ಸಂಘದ ಅಧ್ಯಕ್ಷ ಅಯೂಬ್ ಖಾನ್ ನದಾಫ್, ಕಾರ್ಯದರ್ಶಿ ಮೌಲಾಸಾಬ ಲಾಲಸಾಬ, ಮೀರಾ ನದಾಫ್, ಮೆಹಬೂಬ ಹತ್ತಳ್ಳಿ, ಅಬ್ದುಲ್ ಕರೀಮ್, ಅಬ್ದುಲ್ ಶಿವಣಗಿ ಅನೇಕರು ಇದ್ದರು.