
ಚಿಕ್ಕಬಳ್ಳಾಪುರ,ಮಾ.೧೧-ಧರೆಗಿಳಿಯಲಿದೆ ಏಳುಬೆಟ್ಟಗಳು, ಮೊಳಗಲಿದೆ ಗೋವಿಂದ ನಾಮಸ್ಮರಣೆ, ಮಾರ್ಧನಿಸಲಿದೆ ವೇದ ಘೋಷಗಳು, ಸಾಕ್ಷಾತ್ ತಿರುಮಲೆಯಲ್ಲಿ ನೆಲೆಸಿರುವ ವೆಂಕಟರಮಣಸ್ವಾಮಿಯೇ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ, ಕಲ್ಯಾಣ ಮಾಡಿಕೊಳ್ಳಲಿದ್ದು, ಇದಕ್ಕಾಗಿ ಅದ್ಧೂರಿ ವೇದಿಕೆ ಸಿದ್ಧವಾಗಿದೆ.
ತಿರುಮಲೆಯಲ್ಲಿ ದೇವರ ದರ್ಶನ ಪಡೆಯುವುದೇ ಒಂದು ಸಾಹಸ. ಅಂತಹ ಸ್ಥಿತಿಯಲ್ಲಿ ತಿರುಮಲೆ ದೇವಾಲಯದಲ್ಲಿ ಪ್ರತಿನಿತ್ಯ ನಡೆಯಲಿರುವ ಕಲ್ಯಾಣೋತ್ಸವ ಕಣ್ಣಾರೆ ಕಾಣುವ ಭಾಗ್ಯ ಎಷ್ಟು ಮಂದಿಗೆ ಲಭ್ಯವಾಗಲಿದೆ ಹೇಳಿ. ಇದನ್ನು ಅರಿತಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು, ಚಿಕ್ಕಬಳ್ಳಾಪುರ ಕ್ಷೇತ್ರದ ಎಲ್ಲರಿಗೂ ಕಲ್ಯಾಣೋತ್ಸವ ಕಣ್ಣಾರೆ ಕಾಣುವ ಭಾಗ್ಯವನ್ನು ಕಲ್ಪಿಸಿದ್ದಾರೆ. ತಿರುಪತಿ ತಿರುಮಲೆಯಿಂದ ದೇವರನ್ನು ತರಿಸಿ, ಚಿಕ್ಕಬಳ್ಳಾಪುರದಲ್ಲಿ ಕಲ್ಯಾಣೋತ್ಸವ ನಡೆಸುತ್ತಿದ್ದು, ಇದಕ್ಕೆ ಚಿಕ್ಕಬಳ್ಳಾಪುರ ನಗರ ಸಜ್ಜಾಗಿದೆ.
ಚಿಕ್ಕಬಳ್ಳಾಪುರ ಹೊರವಲಯದ ಸೂಲಾಲಪ್ಪನ ದಿನ್ನೆ ವಿಶಾಲ ಮೈದಾನದಲ್ಲಿ ಈಗಾಗಲೇ ತಿರುಪತಿ ತಿರುಮಲೆ ದೇವಾಲಯದ ಪ್ರತಿರೂಪ ಸಿದ್ಧವಾಗಿದೆ. ಅಲ್ಲದೆ ತಿರುಮಲೆ ದೇವಾಲಯದಲ್ಲಿ ಪ್ರತಿನತಿತ್ಯ ಕಲ್ಯಾಣೋತ್ಸವ ನಡೆಸುವ ವೇದ ಪಂಡಿತರು, ಅಲ್ಲಿ ಕಲ್ಯಾಣೋತ್ಸವ ನಡೆಸುವ ವಿಗ್ರಹಗಳನ್ನೇ ತಂದು ಇಲ್ಲಿ ಕಲ್ಯಾಣೋತ್ಸವ ನೆರವೇರಿಸಲಿದ್ದಾರೆ. ಅಂದರೆ ಟಿಟಿಡಿಯಿಂದಲೇ ಈ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ. ಟಿಟಿಡಿಯಲ್ಲಿ ಪ್ರತಿನಿತ್ಯ ಪೂಜೆ ನಿರ್ವಹಿಸುವ ೩೦೦ಕ್ಕೂ ಹೆಚ್ಚು ಮಂದಿ ಋತ್ವಿಕರು ಈ ಕಲ್ಯಾಣೋತ್ಸವಕ್ಕೆ ಆಗಮಿಸಲಿದ್ದು, ಇವರು ಆಸೀನರಾಗಲು ಅಗತ್ಯ ಯಜ್ಞ ವೇದಿಕೆಯೂ ಸಿದ್ಧವಾಗಿದೆ. ಜೊತೆಗೆ ತಿರುಮಲೆಯಲ್ಲಿರುವ ದೇವಾಲಯದ ಮಾದರಿಯಲ್ಲಿಯೇ ಇಲ್ಲಿ ಪ್ರತಿರೂಪವನ್ನು ನಿರ್ಮಿಸಲಾಗಿದ್ದು, ಈ ಪ್ರದೇಶದೊಳಕ್ಕೆ ಹೆಜ್ಜೆ ಇಟ್ಟರೆ ತಿರುಮಲೆ ದೇವಾಲಯ ಪ್ರವೇಶಿಸಿದ ಅನುಭವ ಬರುವ ರೀತಿಯಲ್ಲಿ ಸೆಟ್ ಹಾಕಲಾಗಿದೆ.
ಭಕ್ತರಿಗಾಗಿ ಉಚಿತ ಬಸ್ ಸೇವೆ
ಶ್ರೀನಿವಾಸ ಕಲ್ಯಾಣೋತ್ಸವ ಮಾ.೧೧ರ ಶನಿವಾರ ನಡೆಯಲಿದೆ. ಚಿಕ್ಕಬಳ್ಳಾಪುರ ಹೊರವಲಯದ ಸೂಲಾಲಪ್ಪನ ದಿನ್ನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಅಂದು ಸಂಜೆ ಕಾರ್ಯಕ್ರಮ ನಡೆಯಲಿದ್ದು, ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ಸಾರಿಗೆ ಸೌಲಭ್ಯವನ್ನು ಆರೋಗ್ಯ ಸಚಿವರೇ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ತಡವಾದರೂ ಕಾರ್ಯಕ್ರಮದಿಂದ ತಮ್ಮ ಸ್ವ ಗ್ರಾಮಗಳಿಗೆ ತೆರಳಲು ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಲಿದ್ದಾರೆ.
ಬಂದವರಿಗೆಲ್ಲ ತಿರುಪತಿ ಪ್ರಸಾದ
ಇಂದು ಸಂಜೆ ನಡೆಯಲಿರುವ ಈ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಬಂದ ಭಕ್ತರೆಲ್ಲರಿಗೂ ತಿರುಪತಿ ಪ್ರಸಾದವನ್ನು ವಿತರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಜೊತೆಗೆ ಬಸ್ ವ್ಯವಸ್ಥೆಯನ್ನೂ ಆಯೋಜಿಸಿರುವ ಹಿನ್ನೆಲೆಯಲ್ಲಿ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಇಂದು ಸಂಜೆ ೪ ಗಂಟೆಗೆ ಆರಂಭವಾಗಲಿರುವ ಕಲ್ಯಾಣೋತ್ಸವ ರಾತ್ರಿ ೮ ಗಂಟೆಯವರೆಗೂ ನಡೆಯಲಿದ್ದು, ೮ ಗಂಟೆಗೆ ಮುಕ್ತಾಯಗೊಳ್ಳಲಿದೆ. ಕ್ಷೇತ್ರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ದೇವರ ಕಪೆಗೆ ಪಾತ್ರರಾಗುವಂತೆ ಈಗಾಗಲೇ ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ.