ಶ್ರೀನಿವಾಸ್ ಬಿಜೆಪಿಗೆ ಬರುವುದಾದರೆ ಸ್ವಾಗತ: ಜಯರಾಮ್

ಗುಬ್ಬಿ, ಜು. ೧೮- ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಬಿಜೆಪಿಗೆ ಬರುವುದಾದರೆ ಸ್ವಾಗತ. ನನಗೆ ಸ್ನೇಹಿತರಾದರೂ ನಾನೆಂದೂ ಈ ಬಗ್ಗೆ ಚರ್ಚಿಸಿಲ್ಲ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಹೇಳಿದರು.
ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಕೆಆರ್‌ಐಡಿಎಲ್ ವತಿಯಿಂದ ಸುಮಾರು ೨.೭೫ ಕೋಟಿ ರೂ.ಗಳ ವಿವಿಧ ಗ್ರಾಮದ ಸಿ.ಸಿ. ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗೋವಾ ಮತ್ತು ಗುಜರಾತ್ ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲದ ರೀತಿ ಸರ್ಕಾರ ರಚನೆಯಾಗಿದೆ. ಮೋದಿ ಅವರ ಅಭಿವೃದ್ದಿ ಮೋಡಿ ಇಲ್ಲಿ ಕೆಲಸ ಮಾಡಿದೆ. ೧೫೦ ಕ್ಕೂ ಅಧಿಕ ಶಾಸಕರನ್ನು ಗೆಲ್ಲಿಸಿಕೊಂಡು ನಮ್ಮಲ್ಲೂ ವಿರೋಧ ಪಕ್ಷ ಇಲ್ಲದಂತೆ ಆಗುವ ಸಾದ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಸುಮಾರು ೫೦ ಕೋಟಿಯ ವಿಶೇಷ ಅನುದಾನವನ್ನು ಶೀಘ್ರದಲ್ಲೇ ನಮ್ಮ ಕ್ಷೇತ್ರಕ್ಕೆ ಬಿಡುಗಡೆ ಮಾಡಲಿದ್ದು, ಈ ಹಣವನ್ನು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಬಳಸುತ್ತೇನೆ. ಈಗಾಗಲೇ ಕ್ಷೇತ್ರದಲ್ಲಿ ಶೇ. ೮೦ ರಷ್ಟು ಕೆಲಸ ಪೂರ್ಣಗೊಂಡಿದೆ ಎಂದರು.
ಬಿಜೆಪಿ ಶಾಸಕರಿಗೆ ಪಕ್ಕದ ಕ್ಷೇತ್ರದ ಜವಾಬ್ದಾರಿ ವಹಿಸುವ ಈ ಬಾರಿಯ ಚುನಾವಣೆಯಲ್ಲಿ ಕುಣಿಗಲ್ ಕ್ಷೇತದಲ್ಲಿ ಬಿಜೆಪಿ ಗೆಲುವಿಗೆ ನಾನು ಶ್ರಮಿಸುತ್ತೇನೆ. ಒನ್ ಪ್ಲೇಸ್ ಒನ್ ಎಂಬ ಈ ಪರಿಕಲ್ಪನೆಯಲ್ಲಿ ಗುಬ್ಬಿ ಕ್ಷೇತ್ರ ಜವಾಬ್ದಾರಿ ಕೊಟ್ಟರೂ ಮಾಡುತ್ತೇನೆ. ಪಕ್ಷ ಸಂಘಟನೆ ಮುಖ್ಯ ಎಂದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾವು ತಯಾರಾಗಿದ್ದೀವಿ. ನಮ್ಮ ಕಾರ್ಯಕರ್ತರು ಸಹ ಸನ್ನದ್ಧರಾಗಿದ್ದಾರೆ ಎಂದು ಅವರು ತಿಳಿಸಿದರು.
ತುರುವೇಕೆರೆ ತಾಲ್ಲೂಕಿನಲ್ಲಿ ೧೨೦ ಶಾಲೆ ದುರಸ್ಥಿ ಕಾರ್ಯ ನಡೆದಿದೆ. ಇನ್ನೂ ೮೦ ಶಾಲೆ ದುರಸ್ಥಿಗೆ ಅರ್ಜಿ ಸಲ್ಲಿಸಿದ್ದೇನೆ ಎಂದ ಅವರು, ಉತ್ತಮ ಮಳೆಯು ಬರುತ್ತಿದ್ದು, ನೆರೆ ಹಾವಳಿಗೆ ತುತ್ತಾದ ಸ್ಥಳಗಳಿಗೆ ಖುದ್ದು ಸಿಎಂ ಅವರೇ ಪ್ರವಾಸ ಮಾಡುತ್ತಿದ್ದು ಹಾನಿ ನಷ್ಟ ಪರಿಶೀಲಿಸಿದ್ದಾರೆ. ಜತೆಗೆ ಪಕ್ಷ ಸಂಘಟನೆಗೂ ಒತ್ತು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪೆದ್ದನಹಳ್ಳಿ ಗ್ರಾ.ಪಂ. ಅಧ್ಯಕ್ಷ ನಾಗರಾಜ್, ತಾ.ಪಂ. ಮಾಜಿ ಸದಸ್ಯ ಭಾನುಪ್ರಕಾಶ್, ಮುಖಂಡರಾದ ಗಂಗಾಧರ್, ಚನ್ನಿಗಪ್ಪ, ನಟರಾಜು, ಕಿರಣ್, ಪ್ರದೀಪ್, ಗುತ್ತಿಗೆದಾರರಾದ ದೇವರಾಜ್, ಚನ್ನಿಗಪ್ಪ ಉಪಸ್ಥಿತರಿದ್ದರು.