ಶ್ರೀನಿವಾಸ್ ಪ್ರಸಾದ್ ಸ್ವಾಭಿಮಾನಿ ರಾಜಕಾರಣಿ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.18:- ಮಾಜಿ ಸಚಿವ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು, ಬದುಕಿನುದ್ದಕ್ಕೂ ಅದರಂತೆ ಬದುಕಿನ ಸ್ವಾಭಿಮಾನಿ ರಾಜಕಾರಣಿಯಾಗಿದ್ದರು ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ನಾಡನಹಳ್ಳಿ ಬಳಿ ಇರುವ ಶ್ರೀ ಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ದಿವಂಗತ ವಿ.ಶ್ರೀನಿವಾಸ್ ಪ್ರಸಾದ್ ಅವರ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀನಿವಾಸ್ ಪ್ರಸಾದ್ ಅವರು ದಲಿತ, ಹಿಂದುಳಿದ ವರ್ಗದ ದೊಡ್ಡ ಶಕ್ತಿಯಾಗಿದ್ದರು. ಅಂಬೇಡ್ಕರ್ ಸಿದ್ಧಾಂತಗಳನ್ನು ಪಾಲಿಸುತ್ತಿದ್ದ ಅವರು, ಸಂವಿಧಾನಕ್ಕೆ ತೊಂದರೆ ಎದುರಾದಾಗ ಹೋರಾಡುತ್ತಿದ್ದರು. ತಮ್ಮ 50 ವರ್ಷಗಳ ರಾಜಕೀಯ ಜೀವನದಲ್ಲಿ ಎಂದಿಗೂ ರಾಜಿಯಾಗದೆ, ತಮ್ಮ ಸಿದ್ಧಾಂತ, ನಂಬಿಕೆಗಳಿಗೆ ಬದ್ಧವಾಗಿದ್ದವರು ಎಂದರು.
ದಲಿತರು, ಹಿಂದುಳಿದವರು ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಾ ಸ್ವಾಭಿಮಾನದಿಂದ ಬದುಕಬೇಕು ಎಂದು ಹೇಳುತ್ತಿದ್ದರು. ಅವರಿಗೆ ಅನ್ಯಾಯವಾದರೆ ಸ್ವತಃ ತಾವೇ ಹೋರಾಟ ಮಾಡುತ್ತಿದ್ದರು. ತಮ್ಮನ್ನು ನಂಬಿದವರನ್ನು ಎಂದಿಗೂ ಕೈ ಬಿಟ್ಟವರಲ್ಲ. ನಮ್ಮ ತಂದೆ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್‍ಪ್ರಸಾದ ಅವರಿಗೆ ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಸಹ ಒಳ್ಳೆಯ ಸ್ನೇಹಿತರಾಗಿದ್ದರು ಎಂದು ಸ್ಮರಿಸಿದರು.
ಸಿದ್ದರಾಮಯ್ಯ ಅವರಿಗೆ ಶ್ರೀನಿವಾಸ್ ಪ್ರಸಾದ್‍ರ ಬಗ್ಗೆ ಅಪಾರ ಗೌರವವಿದೆ. ಶ್ರೀನಿವಾಸ್ ಪ್ರಸಾದ್ ಅವರು 50 ವರ್ಷದ ರಾಜಕಾರಣದಲ್ಲಿ ಅಜಾತಶತ್ರುವಾಗಿದ್ದರು. ಅವರ ಬಗ್ಗೆ ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು ಅಪಾರ ಗೌರವ ಇಟ್ಟುಕೊಂಡಿದ್ದರು. ಜನರ ಮಧ್ಯೆ ಇದ್ದು, ಜನರ ಪ್ರೀತಿಗೆ ಪಾತ್ರರಾಗಿ ಅಪಾರ ಜನಮನ್ನಣೆ ಗಳಿಸಿದ ಅಪರೂಪದ ರಾಜಕಾರಣಿಯಾಗಿದ್ದರು. ಶ್ರೀನಿವಾಸ್ ಪ್ರಸಾದ್ ಅವರ ಜೀವನ ಆದರ್ಶ ಎಲ್ಲಾ ಪಕ್ಷದ ಯುವ ರಾಜಕಾರಣಿಗಳಿಗೆ ಸ್ಪೂರ್ತಿಯಾಗಬೇಕು. ಅವರ ನೆನಪು ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು.
ಶ್ರೀನಿವಾಸಪ್ರಸಾದ್ ಅವರು ಕೆಲ ಕಾರಣಗಳಿಂದ ಪಕ್ಷ ಬದಲಾಯಿಸಿದ್ದರು. ಆದರೆ, ಎಂದಿಗೂ ತತ್ವಾಂತರಿಯಾಗಿರಲಿಲ್ಲ. ಯಾವ ಪಕ್ಷದಲ್ಲಿದ್ದರೂ ತಾವು ನಂಬಿದ ತತ್ವ ಸಿದ್ಧಾಂತಕ್ಕೆ ಬದ್ಧವಾಗಿ ಬದುಕುತ್ತಿದ್ದರು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ಬಂತೇಜಿ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿದರು. ಮುಖಂಡರಾದ ಮಣಿಯಯ್ಯ, ರಂಗಸ್ವಾಮಿ, ರಮೇಶ ಮುದ್ದೇಗೌಡ, ಹೆಳವರಹುಂಡಿ ಸೋಮು, ಎಂ.ಟಿ.ರವಿಕುಮಾರ್, ಮಂಜುಳಾ ಮಂಜುನಾಥ್, ಮಹದೇವ್, ಜವರಪ್ಪ, ಸಕ್ಕಳ್ಳಿ ಬಸವರಾಜು, ಕನಕಮೂರ್ತಿ, ಹುಣಸೂರು ಬಸವಣ್ಣ, ಆಪ್ತ ಸಹಾಯಕ ಶಿವಸ್ವಾಮಿ, ನಾಗರಾಜ್ ಹಾಜರಿದ್ದರು.