ಶ್ರೀನಗರ ಮುಕುಟಕ್ಕೆ ಮತ್ತೊಂದು ಗರಿ

ಕಾಶ್ಮೀರ, ನ.೯- ಕರಕುಶಲ ಹಾಗೂ ಜಾನಪದ ಕಲೆಯಲ್ಲಿ ಶ್ರೀಮಂತಿಕೆ ಹೊಂದಿರುವ ಜಮ್ಮು ಕಾಶ್ಮೀರ ಮುಕುಟಕ್ಕೆ ಮತ್ತೊಂದು ಗರಿ ಮೂಡಿದ್ದು, ಯುನೆಸ್ಕೋದ ಸೃಜನಶೀಲ ನಗರಗಳಲ್ಲಿ ಪಟ್ಟಿಯಲ್ಲಿ ಇದೀಗ ಶ್ರೀನಗರಕ್ಕೆ ಸ್ಥಾನ ನೀಡಲಾಗಿದೆ. ಈ ಕೀರ್ತಿಗೆ ಪಾತ್ರವಾದ ಭಾರತದ ಏಕೈಕ ನಗರ ಎಂಬ ಹೆಗ್ಗಲಿಕೆ ಶ್ರೀನಗರಕ್ಕೆ ಸಿಕ್ಕಿದೆ.
ಅತ್ತ ಯುನೆಸ್ಕೋ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಶ್ರೀನಗರದ ಹೆಸರು ಘೋಷಿಸುತ್ತಿದ್ದಂತೆ ಇತ್ತ ಪ್ರಧಾನಿ ನರೇಂದ್ರ ಮೋದಿಯವರು ಸಂತಸ ವ್ಯಕ್ತಪಡಿಸುತ್ತಾ ಟ್ವೀಟ್ ಮಾಡಿದ್ದಾರೆ. ಯೆನೆಸ್ಕೋದ ಸೃಜನಶೀಲ ನಗರದ ಪಟ್ಟಿಯಲ್ಲಿ ಶ್ರೀನಗರ ಸೇರಿಕೊಂಡಿರುವುದು ಅತೀವ ಸಂತಸ ತಂದಿದೆ. ಶ್ರೀನಗರದ ಶ್ರೀಮಂತ ಕರಕುಶಲ ಹಾಗೂ ಜಾನಪದ ಕಲೆಯನ್ನು ಯುನೆಸ್ಕೋ ಗುರುತಿಸಿದೆ. ಜಮ್ಮು ಕಾಶ್ಮೀರದ ಜನತೆಗೆ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಯೆನೆಸ್ಕೋ ೪೯ ನಗರಗಳ ಪಟ್ಟಿಯನ್ನು ಹೊಸದಾಗಿ ಸೇರ್ಪಡೆಗೊಳಿಸಿದ್ದು, ಈ ಮೂಲಕ ಒಟ್ಟು ನಗರಗಳ ಸಂಖ್ಯೆ ೨೪೬ಕ್ಕೇರಿದೆ. ಈಗಾಗಲೇ ಜಮ್ಮು ಕಾಶ್ಮೀರ ವಿಶ್ವ ಪ್ರವಾಸೋದ್ಯಮಗಳ ನಗರಗಳ ಪಟ್ಟಿಯಲ್ಲಿ ಮಹೋನ್ನತ ಸಾಧನೆ ತೋರಿದ್ದು, ಇದೀಗ ಸೃಜನಶೀಲ ನಗರಗಳ ಪಟ್ಟಿಯಲ್ಲಿ ಅವಕಾಶ ಪಡೆದುಕೊಂಡಿದೆ. ಇದು ಜಮ್ಮು ಕಾಶ್ಮೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತಷ್ಟು ಕೊಡುಗೆ ನೀಡಲಿದೆ ಎನ್ನಲಾಗಿದೆ.