ಶ್ರೀಧರಗಡ್ಡೆಯಲ್ಲಿ ಅಂಚೆ ಜನಸಂಪರ್ಕ ಅಭಿಯಾನಕ್ಕೆ ಚಾಲನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.15;  ದೇಶದ ಜನರಿಗೆ ಕಳೆದ 169 ವರ್ಷಗಳ ಸುಧಿರ್ಘ ಸೇವೆ ನೀಡಿದ ಅಂಚೆ ಇಲಾಖೆ ಈಗ ಅಂಚೆ ಜನ ಸಂಪರ್ಕ ಅಭಿಯಾನ ಹಮ್ಮಿಕೊಂಡಿದೆ.
ತಾಲೂಕಿನ  ಶ್ರೀಧರಗಡ್ಡೆ ಗ್ರಾಮದಲ್ಲಿ  ಇಂದು ಅಭಿಯಾನ  ಉದ್ಘಾಟಿಸಿದ ಕಂಪ್ಲಿ ಶಾಸಕ ಜೆ ಏನ್ ಗಣೇಶ್,  ಜೀವನದಲ್ಲಿ ಪ್ರತಿಯೊಬ್ಬರೂ ಮುಂದಾಲೋಚನೆಯಿಂದ ಭವಿಷ್ಯತ್ತಿಗಾಗಿ ಅಂಚೆ ಇಲಾಖೆಯ ಸುರಕ್ಷಿತ ಮತ್ತು ಆಕರ್ಷಕ ವಾದ  ಉಳಿತಾಯ ಹಾಗೂ ಇನ್ಶೂರೆನ್ಸ್ ಯೋಜನೆಗಳ ಸೇವೆ ಪಡೆಯಲು ಕೋರಿದರು. ಜೀವ ವಿಮೆ ಮತ್ತು ಬೆಳೆ ವಿಮೆಗಳು ಸಂಕಷ್ಟ ಕಾಲದಲ್ಲಿ ಕೈಹಿಡಿಯಲಿದ್ದು ನಮ್ಮ ಕ್ಷೇತ್ರದ ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆಯಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಚೆ ಅಧೀಕ್ಷಕ ವಿ.ಎಲ್.ಚಿತಕೋಟೆ ಪ್ರತಿಯೊಬ್ಬರಿಗೂ ಅಂಚೆ ಕಛೇರಿ ಚಿರಪರಿಚಿತ, ಪತ್ರ ಬಟಾವಡೆಯ ಜೊತೆಗೆ ಬ್ಯಾಂಕಿಂಗ್, ಇನ್ಶೂರೆನ್ಸ್ ಮತ್ತು ರಿಟೇಲ್ ಸೇವೆಯ ಕ್ಷೇತ್ರದಲ್ಲೂ ಜನಸೇವೆಯಲ್ಲಿ ತೊಡಗಿದೆ, 20 ರೂಪಾಯಿಯಲ್ಲಿ 2 ಲಕ್ಷ, 396 ರೂಪಾಯಿಗೆ 10 ಲಕ್ಷ ಸಿಗುವ ಅಪಘಾತ ಜೀವ ವಿಮೆ ಯಂತ ಕೈಗೆಟುಕುವ ವಿಮೆ, ಆಧಾರ್ ಕಾರ್ಡ್, ಪಾಸ್ಪೋರ್ಟ್  ಸೇವೆಗಳು ನಮ್ಮಲ್ಲಿ ಸಿಗುತ್ತಿವೆ ಎಂದು ತಿಳಿಸಿದರು.
ಸಾನಿದ್ಯ ವಹಿಸಿದ ಮರಿಕೊಟ್ಟೂರು ದೇವರು ಆಶೀರ್ವಚನದಲ್ಲಿ ಜನಸಾಮಾನ್ಯರು ಕಷ್ಟಪಟ್ಟು ಕಾಯಕಮಾಡಿ, ಆದಾಯವನ್ನು ದುಶ್ಚಟಗಳಿಗೆ ದಾಸರಾಗದೆ ಸೇವಾ ಮನೋಭಾವದ ಅಂಚೆಕಚೇರಿ ಯ ವಿವಿಧ ಯೋಜನೆಗಳ ಲಾಭಪಡೆದು, ಘನತೆಯ ಜೀವನ ನಡೆಸಲು ಸಲಹೆನೀಡಿದರು.
ಬಳ್ಳಾರಿ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಪಿ.ಚಿದಾನಂದ ಸ್ವಾಗತಿಸಿದರು, ವಿಭಾಗೀಯ ಕಚೇರಿಯ ಅಲ್ಲಾಸಾಬ್ ನಿರೂಪಿಸಿದರು ಮತ್ತು ಶಾಖಾ ಅಂಚೆ ಪಾಲಕ ವೀರಭದ್ರಯ್ಯ ಸ್ವಾಮಿ ವಂದಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಬಸಮ್ಮ, ಪಿಡಿಒ ಪ್ರಾಣೇಶ್, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಚೈತನ್ಯಪ್ರಸಾದ್, ಗ್ರಾಮ ಮುಖಂಡರಾದ ಅಶೋಕಗೌಡ, ದೊಡ್ಡನಗೌಡ, ಗ್ರಾಮ ಪಂಚಾಯತಿ ಸದಸ್ಯರು, ಅಂಚೆ ಸಿಬ್ಬಂದಿ, 200ಕ್ಕೂ ಅಧಿಕ ಗ್ರಾಮಸ್ಥರು ಪಾಲ್ಗೊಂಡಿದ್ದರು.. ಗ್ರಾಮದಲ್ಲಿ ಆಧಾರ್ ನೋಂದಣಿ, ಹೊಸ ಉಳಿತಾಯ ಖಾತೆ ಮತ್ತು ವಿಮೆಯ ಕೌಂಟರ್ ತೆರೆಯಲಾಗಿತ್ತು. 150 ಜನ ಇದರ ಲಾಭಪಡೆದರು.