
(ಸಂಜೆವಾಣಿ ವಾರ್ತೆ)
ಚಿತ್ತಾಪುರ:ಮಾ.5: ತಾಲೂಕಿನ ದಿಗ್ಗಾಂವ ಗ್ರಾಮ ಪಂಚಾಯತಿಯ 4ನೇ ಬ್ಲಾಕ್ ಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀದೇವಿ ಶ್ರೀಮಂತ ಗುತ್ತೇದಾರ 219 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸದಸ್ಯೆ ಸಂಜಮ್ಮ ಅಶೋಕ ಗುತ್ತೇದಾರ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಒಟ್ಟು 1228 ಮತಗಳ ಪೈಕಿ 798 ಮತಗಳು ಚಲಾವಣೆಯಾಗಿದ್ದವು. ತಹಸೀಲ್ ಕಚೇರಿಯಲ್ಲಿ ನಡೆದ ಮತ ಏಣಿಕೆಯಲ್ಲಿ ಶ್ರೀದೇವಿ ಶ್ರೀಮಂತ ಗುತ್ತೇದಾರ 501 ಮತಗಳೂ ಪಡೆದು ಗೆಲುವು ಸಾಧಿಸಿದ್ದಾರೆ. ರಾಜೇಶ್ವರಿ ಸಿದ್ದಣ್ಣ 282 ಮತಗಳು ಪಡೆದು ಸೋಲು ಅನುಭವಿಸಿದರು. 15 ಮತಗಳು ತಿರಸ್ಕøತಗೊಂಡಿವೆ ಎಂದು ತಹಸೀಲ್ದಾರ ಉಮಾಕಾಂತ ಹಳ್ಳೆ ತಿಳಿಸಿದ್ದಾರೆ.
ವಿಜಯೋತ್ಸವ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀದೇವಿ ಶ್ರೀಮಂತ ಗುತ್ತೇದಾರ ಗೆಲುವು ಘೊಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ತಹಸೀಲ್ ಕಚೇರಿ ಹೊರಗಡೆ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಪರವಾಗಿರುವುದು ಮತ್ತೋಮ್ಮೆ ಸಾಬೀತಾಗಿದೆ. ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ದಿಪರ ಚಿಂತನೆಗಳಿಗೆ ಮತದಾರರು ಬೆಂಬಲಿಸಿದ್ದಾರ ಇದರಿಂದ ಚಿತ್ತಾಪುರ ಕಾಂಗ್ರೆಸ್ ಭದ್ರಕೋಟೆಯಾಗಿದೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಶಿವರುದ್ರ ಭೀಣಿ, ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಮಂತ ಗುತ್ತೇದಾರ, ಪ್ರಮುಖರಾದ ಸಿದ್ದಣ್ಣಗೌಡ ಆರ್‍ಡಿ, ಮಲ್ಲಿನಾಥ ಭಾಗೋಡಿ, ದೇವಿಂದ್ರಪ್ಪ ಅಣಿಕೇರಿ, ಮಲ್ಲಶೆಟ್ಟಪ್ಪ ಸಂಗಾವಿ, ಶರಣು ಸಜ್ಜನ್, ಗುರುಲಿಂಗ ಬಂದಳ್ಳಿ, ಅರ್ಜುನ್ ಕಡಿಶಾಪುರ್, ಶುಕ್ರುಮಿಯ್ಯಾ, ಬುರಾನಸಾಬ್ ಕಡಚ್ಗೇರ್, ನಾಗರಾಜ ಪಾಟೀಲ, ರಾಘವೇಂದ್ರ ಗುತ್ತೇದಾರ, ಸುಭಾಷ ಪವಾರ್, ರಮೇಶ ಗುತ್ತೇದಾರ, ದೇವಿಂದ್ರ ಇಟಗಿ, ಮಲ್ಲಿನಾಥ ಇಟಗಿ, ತುಕಾರಾಂ ಸೇರಿದಂತೆ ಇತರರು ಇದ್ದರು. ನಂತರ ಚಿತ್ತಾಪುರ ಪಟ್ಟಣ ಹಾಗೂ ದಿಗ್ಗಾಂವ ಗ್ರಾಮದಲ್ಲಿ ಯುವಕರು ಬೈಕ್ ರ್ಯಾಲಿ ನಡೆಸಿ ವಿಜಯೋತ್ಸವ ಆಚರಿಸಿದರು.