ಶ್ರೀದಂಡಗುಂಡ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವಹಿಸಲು ಆಗ್ರಹ

ಕಲಬುರಗಿ,ನ.12- ಜಿಲ್ಲೆಯ ದೊಡ್ಡ ದೇವಾಲಯಗಳಲ್ಲಿ ಒಂದಾಗಿರುವ ಚಿತ್ತಾಪೂರ ತಾಲೂಕಿನ ಸುಕ್ಷೇತ್ರ ಶ್ರೀದಂಡಗುಂಡ ಬಸವಣ್ಣ ದೇವಸ್ಥಾನ ಅಗತ್ಯ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಇದರ ಸಮಗ್ರ ಅಭಿವೃದ್ದಿಗಾಗಿ ಮುಜರಾಯಿ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಪ್ರಾದೇಶಿಕ ಆಯುಕ್ತರ ಮೂಲಕ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ವೀರ ಕನ್ನಡಿಗರ ಸೇನೆಯ ನಿಯೋಗ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಈ ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಲ್ಲಿ ದೇವಸ್ಥಾನ ಸೇವಾ ಸಮಿತಿ ಸಂಪೂರ್ಣ ವಿಫಲವಾಗಿದೆ. ಭಕ್ತರ ದೇಣಿಗೆ ಹಣದ ಲೆಕ್ಕಪತ್ರವನ್ನು ಸಹ ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತಿಲ್ಲ ಹೀಗಾಗಿ ಇಲ್ಲಿ ಭಕ್ತರ ದೇಣಿಗೆ ಹಣ ದುರುಪಯೋಗ ಆಗುತ್ತಿರುವುದು ಕಂಡು ಬರುತ್ತಿದೆ.
ಚಿತ್ತಾಪೂರ ತಾಲೂಕಿನ ಶ್ರೀ ನಾಗಾಲಾಂಬಿಕಾ ದೇವಸ್ಥಾನವನ್ನು ಮುಜರಾಯಿ ಇಲಾಖೆ ಅಭಿವೃದ್ದಿ ಪಡಿಸಿದಂತೆ ಶ್ರೀದಂಡಗುಂಡ ದೇವಸ್ಥಾನವನ್ನು ತನ್ನ ಅಧಿನಕ್ಕೆ ಪಡೆದುಕೊಂಡು ಅಭಿವೃದ್ದಿ ಪಡಿಸಬೇಕು, ಅಲ್ಲಿನ ಸೇವಾ ಸಮಿತಿಯನ್ನು ರದ್ದುಪಡಿಸಿ ಮುಜರಾಯಿ ಇಲಾಖೆಗೆ ಹಸ್ತಾಂತರಿಸಬೇಕು ಎಂಬ ಬೇಡಿಕೆಯ ಮನವಿಯನ್ನು ಸೇನೆಯ ಅಧ್ಯಕ್ಷ ಅಮೃತ ಸಿ.ಪಾಟೀಲ ಸಿರನೂರ ಅವರು ಪ್ರಾದೇಶಿಕ ಆಯಕ್ತರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರವಿ ಒಂಟಿ, ಅನಿಲ ತಳವಾರ, ಸಿದ್ದು ಕಂದಗಲ, ಶಿವನಂದ, ಸುದೀಂದ್ರ ರಜನಿಕಾಂತ, ಶ್ರಾವಣಕುಮಾರ, ವೆಂಕಟೇಶ ಸೇರಿದಂತೆ ಹಲವರಿದ್ದರು.