ಶ್ರೀಚನ್ನಸೋಮೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ

ಗೌರಿಬಿದನೂರು, ಡಿ. ೬:ತಾಲ್ಲೂಕಿನ ಅಲಕಾಪುರದಲ್ಲಿನ ಶ್ರೀಚನ್ನಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಕೊನೆಯ ಶನಿವಾರದಂದು ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಸ್ಥಳೀಯರು ಹಾಗೂ ಭಕ್ತಾಧಿಗಳ ಸಹಕಾರದಿಂದ ನಡೆಸಲಾಯಿತು.
ದೇವಾಲಯದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳ ಜತೆಗೆ ಪೂಜಾ ಕೈಂಕಾರ್ಯಗಳನ್ನು ನೆರವೇರಿಸ ಲಾಯಿತು. ಇದರೊಂದಿಗೆ ಸ್ಥಳೀಯರು ಆಸಕ್ತಿಯಿಂದ ಭಾಗವಹಿಸಿ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡರು. ಸಂಜೆ ೬ ಗಂಟೆಗೆ ದೇವಸ್ಥಾನದ ಆವರಣದಲ್ಲಿ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ದೀಪಗಳನ್ನು ಹಚ್ಚುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರು.
ಧಾರ್ಮಿಕ ಕಾರ್ಯದಲ್ಲಿ ತಹಸೀಲ್ದಾರ್ ಎಚ್.ಶ್ರೀನಿವಾಸ್ ಭಾಗವಹಿಸಿ, ಪುರಾತನ ಹಾಗೂ ಧಾರ್ಮಿಕ ನೆಲೆಯೊಂದಿಗೆ ಈ ದೇವಾಲಯದಲ್ಲಿ ದಶಕಗಳಿಂದಲೂ ಸ್ಥಳೀಯರ ಸಹಕಾರದೊಂದಿಗೆ ಭಕ್ತಿಪೂರ್ವಕವಾಗಿ ದೇವತಾ ಕಾರ್ಯಗಳು ನಡೆಯುತ್ತಿರುವುದು ವಿಶೇಷವಾಗಿದೆ. ಇತ್ತೀಚೆಗಷ್ಟೇ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ಹಾಗೂ ದಾನಿಗಳ ಸಹಕಾರದಿಂದಾಗಿ ದೇವಾಲಯದ ಜೀರ್ಣೋದ್ದಾರ ಕಾರ್ಯ ನಡೆಸುವ ಮೂಲಕ ಶಿಥಿಲಾವಸ್ಥೆಯಲ್ಲಿದ್ದ ದೇವಾಲಯಕ್ಕೆ ಆಧುನಿಕ ಸ್ಪರ್ಶ ನೀಡುವ ಮೂಲಕ ಸಾವಿರಾರು ಭಕ್ತಾಧಿಗಳ ಸೇವೆಗೆ ಅನುಕೂಲ ಮಾಡಲಾಗಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಶ್ರದ್ಧೆ ಮತ್ತು ಭಕ್ತಿಪೂರ್ವಕವಾಗಿ ಸ್ಥಳೀಯರ ಸಹಕಾರದೊಂದಿಗೆ ಲಕ್ಷ ದೀಪೋತ್ಸವ ಕಾರ್ಯ ನಡೆಯುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದರು.
ಇದೇ ವೇಳೆ ಕಂದಾಯ ಅಧಿಕಾರಿಗಳಾದ ಜಯಪ್ರಕಾಶ್, ರವಿ, ಶಿವಪ್ರಸಾದ್, ಮುಖಂಡರಾದ ಆರ್.ಪಿ.ಗೋಪಾಲಗೌಡ, ಪ್ರಭಾಕರ್, ಬಿ.ಜಿ.ವೇಣುಗೋಪಾಲರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.