ಶ್ರೀಚಂದ್ ರೈತ ಜಲಸಮಾಧಿ: 20 ಲಕ್ಷ ರೂ.ಗಳ ಪರಿಹಾರಕ್ಕೆ ಆಗ್ರಹ

ಕಲಬುರಗಿ:ಸೆ. 21: ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶ್ರೀಚಂದ್ ಹಳ್ಳದ ಸೇತುವೆಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಅಸುನೀಗಿದ ರೈತ ಪೀರಶೆಟ್ಟಿ ತಂದೆ ಹಣಮಂತ್ ಪೂಜಾರಿ (29) ಸಂತ್ರಸ್ತ ಕುಟುಂಬಕ್ಕೆ ರಾಜ್ಯ ಸರ್ಕಾರವು 20 ಲಕ್ಷ ರೂ.ಗಳ ಪರಿಹಾರ ಕೊಡಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ವಿಜಯಕುಮಾರ್ ಜಿ. ರಾಮಕೃಷ್ಣ ಅವರು ಒತ್ತಾಯಿಸಿದರು.
ಸೋಮವಾರ ಮೃತ ರೈತನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹಾಗೂ ಧೈರ್ಯ ಹೇಳಿ ಮಾತನಾಡಿದ ಅವರು, ರೈತನ ಸಾವಿಗೆ ರಾಜ್ಯ ಸರ್ಕಾರವೇ ಹೊಣೆಯಾಗಿದೆ ಎಂದು ಆರೋಪಿಸಿದರು.
ಶ್ರೀಚಂದ್ ಗ್ರಾಮದ ಬಳಿ ಕಳೆದ 2006ರಲ್ಲಿ 80,000ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ ಸೇತುವೆಯು ಅವೈಜ್ಞಾನಿಕವಾಗಿದೆ. ಯಾವುದೇ ರೀತಿಯಲ್ಲಿ ಸುರಕ್ಷತೆ ಇರಲಿಲ್ಲ. ಅದನ್ನು ಮನಗಂಡು ತಂದೆ ದಿ. ಜಿ. ರಾಮಕೃಷ್ಣ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ 2.90 ಕೋಟಿ ರೂ.ಗಳ ವೆಚ್ಚದಲ್ಲಿ ವೈಜ್ಞಾನಿಕ ಸೇತುವೆಯ ನಿರ್ಮಾಣಕ್ಕೆ 2017ರಲ್ಲಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ನಂತರ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿಲ್ಲ. ಹೀಗಾಗಿ ಅದು ಕಾರ್ಯಗತವಾಗಿಲ್ಲ. ಒಂದು ವೇಳೆ ಅನುಮೋದನೆ ಸಿಕ್ಕಿದ್ದರೆ ಅಮಾಯಕ ರೈತನ ಜೀವ ಉಳಿಯುತ್ತಿತ್ತು ಎಂದು ಅವರು ಹೇಳಿದರು.
ಹಾಲಿ ಶಾಸಕರು ಈ ಕುರಿತು ಗಮನಹರಿಸಬೇಕು. ಶ್ರೀಚಂದ್ ಹಾಗೂ ಅಪಚಂದ್ ಗ್ರಾಮಗಳ ಜನರ ಸುರಕ್ಷತೆಗಾಗಿ ಅವೈಜ್ಞಾನಿಕ ಸೇತುವೆಯನ್ನು ತೆರವುಗೊಳಿಸಿ, ತಂದೆ ಜಿ. ರಾಮಕೃಷ್ಣ ಅವರು ಪ್ರಸ್ತಾವನೆ ಸಲ್ಲಿಸಿದ ಯೋಜನೆಗೆ ಅನುಮೋದನೆ ಪಡೆಯಲು ಯತ್ನಿಸಬೇಕು ಎಂದು ಅವರು ಒತ್ತಾಯಿಸಿದರು.
ಮೃತ ರೈತನ ಸಂತ್ರಸ್ತ ಕುಟುಂಬಕ್ಕೆ ಕೇವಲ ಐದು ಲಕ್ಷ ರೂ.ಗಳ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳಬಾರದು. ಬದಲಿಗೆ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಲು 20 ಲಕ್ಷ ರೂ.ಗಳ ಪರಿಹಾರ ಕೊಡಬೇಕು ಎಂದು ಅವರು ಆಗ್ರಹಿಸಿದರು.
ರೈತ ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ತಕ್ಷಣ ಸ್ಥಳಕ್ಕೆ ಧಾವಿಸಿ ಮೃತನ ಶರೀರ ಪತ್ತೆಗೆ ಮುಂದಾಗಿದ್ದೆ. ಆದಾಗ್ಯೂ, ಪೋಲಿಸರು, ನೈಸರ್ಗಿಕ ವಿಕೋಪ ನಿಯಂತ್ರಣ ಪಡೆಯವರು ಪ್ರವಾಹ ಹೆಚ್ಚುತ್ತಿದ್ದು, ಈ ಸಂದರ್ಭದಲ್ಲಿ ಕಾರ್ಯಾಚರಣೆ ಬೇಡ. ಮೃತ ಶರೀರವು ಮಡುವಿನಲ್ಲಿಯೇ ಹಗ್ಗದಲ್ಲಿ ಸಿಕ್ಕಿ ಹಾಕಿಕೊಂಡು ಇದ್ದು, ಅದು ಪ್ರವಾಹದಲ್ಲಿ ಮುಂದೆ ಹೋಗದು. ಬೆಳಿಗ್ಗೆಯೇ ಕಾರ್ಯಾಚರಣೆ ಕೈಗೊಂಡು ಮೃತ ಶರೀರವನ್ನು ಹೊರತೆಗೆಯೋಣ ಎಂದರು. ಹೀಗಾಗಿ ನಾನು ತಕ್ಷಣದ ಕಾರ್ಯಾಚರಣೆಯನ್ನು ಕೈಬಿಟ್ಟೆ ಎಂದು ಅವರು ಹೇಳಿದರು.
ಇಂತಹ ಘಟನೆಗಳು ಮರುಕಳಿಸದಂತೆ ಕೂಡಲೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ವೈಜ್ಞಾನಿಕ ಸೇತುವೆಯನ್ನು ಪುನರ್ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿಎರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಶರಣಗೌಡ ಡಿ. ಪಾಟೀಲ್, ವಿಠಲ್ ಕಾಂಬ್ಳೆ ಹೊಡಲ್, ಪರಮೇಶ್ವರ್ ಅಪಚಂದ್, ಗೌತಮ್, ನಿಜಲಿ ಗಪ್ಪ ಮೇತ್ರಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.