ಶ್ರೀಚಂದ್ ಗ್ರಾಮದಲ್ಲಿ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಜಾರಿಗೆ ಬಡಿಗೇರ್ ಆಗ್ರಹ

ಕಲಬುರಗಿ,ನ.9:ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಶ್ರೀಚಂದ್ ಗ್ರಾಮದಲ್ಲಿ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಹೊಲದ ಕಡೆಗೆ ಹೋಗುವ ರಸ್ತೆ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಗ್ರಾಮದ ರೈತ ಡಾ. ಸುಭಾಷ್ ತಂದೆ ಶರಣಪ್ಪಾ ಬಡಿಗೇರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಚಂದ್ ಗ್ರಾಮದ ಪಶ್ಚಿಮ ಭಾಗಕ್ಕೆ ಅಂದರೆ ಶ್ರೀಚಂದದಿಂದ ಜವಳಗಾ ಹಾಣಾದಿ ರಸ್ತೆ ಮಾಡಿಸಲು ಈ ಹಿಂದೆ ಕಮಲಾಪುರ ತಹಸಿಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ಹೊಲದ ಕಡೆಗೆ ಹೋಗುವ ರಸ್ತೆ ಮಾಡಿಸಲು ಅರ್ಜಿ ಕೊಟ್ಟರೂ ಸಹ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಮಾರು 50 ಜನ ಬಡ ರೈತರಿಗೆ ಹೋಗಲು ದಾರಿ ಸರಿಯಿಲ್ಲ. ದನಕುರಿಗಳಿಗೆ, ಮನುಷ್ಯರಿಗೆ ಪ್ರಾಣ ಸಂಕಟವಾಗಿದೆ. ಬೇಸಿಗೆ ಕಾಲದಲ್ಲಿ ಎತ್ತಿನ ಗಾಡಿ ಹೋಗಲು ತುಂಬಾ ಕಷ್ಟವಾಗುತ್ತದೆ. ಮಳೆಗಾಲದಲ್ಲಿ ಆ ಸೀಮಾಂತರದ ಹೊಲಗಳಿಗೆ ರೈತರಿಗೆ ಹೋಗಲು ಬರುವುದಿಲ್ಲ. ಬೇರೆಯವರ ಹೊಗಳಿಂದ ಹೋದರೆ ಸದರಿ ಹೊಲದವರು ಹೋಗಲು ಬಿಡುವುದಿಲ್ಲ. ಇದರಿಂದ ಜಗಳ ಮಾಡುತ್ತಿದ್ದಾರೆ. ನೂರಾರು ರೈತರ ಪ್ರಾಣ ಸಂಕಷ್ಟದ ರಸ್ತೆಯನ್ನು ಸರಿಪಡಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಪಹಣಿ ನಕ್ಷೆಯಲ್ಲಿ ಇರುವಂತೆ ರಸ್ತೆಯು ಮತ್ತು ಹಣಾದಿಯು ರಸ್ತೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ಹೊಲದ ಕಡೆಗೆ ಹೋಗುವ ರಸ್ತೆ ಮಾಡಿಸಬೇಕು. ಅತೀ ಶೀಘ್ರದಲ್ಲಿ ಬೇಡಿಕೆಗೆ ಸ್ಪಂದಿಸುವ ಮೂಲಕ ಸರ್ವೆ ನಂಬರ್ 50ರಲ್ಲಿ ಇರುವ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.