ಶ್ರೀಗಳ ಮಹತ್ಕಾರ್ಯ ಅಜರಾಮರ…

 • ಎಂ. ರಮೇಶ್ ಚಿ. ಸಾರಂಗಿ
  ತುಮಕೂರು: ತ್ರಿವಿಧ ದಾಸೋಹ ಮೂರ್ತಿ, ನಡೆದಾಡುವ ದೇವರು ಎಂದೇ ನಾಡಿನಾದ್ಯಂತ ಹೆಸರಾಗಿರುವ ಕರ್ನಾಟಕ ರತ್ನ, ಪದ್ಮಭೂಷಣ ಸಿದ್ದಗಂಗಾ ಮಠಾಧ್ಯಕ್ಷರಾಗಿದ್ದ ಕಾಯಕ ಯೋಗಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ನಿಸ್ವಾರ್ಥ ಸೇವೆ, ಬಡ ಮಕ್ಕಳ ಸಲುಹಿದ ರೀತಿ ನೀತಿ, ಹಸಿದವರಿಗೆ ಅನ್ನದಾಸೋಹ, ಜ್ಞಾನ ದಾಸೋಹ ಹಂಚಿದ ಪರಿ ಇಡೀ ಜಗತ್ತಿಗೆ ಮಾದರಿ. ಶ್ರೀಕ್ಷೇತ್ರದ ಅಭಿವೃದ್ಧಿಗಾಗಿ ಮಾಡಿದ ತ್ಯಾಗ, ಸಾಮಾಜಿಕ ಸೇವೆ ಸೇರಿದಂತೆ ಶ್ರೀಗಳ ಮಹತ್ಕಾರ್ಯಗಳು ಮುಂದಿನ ನೂರಾರು ವರ್ಷಗಳು ಕಳೆದರೂ ಅಜರಾಮರ…
  ಸಿದ್ದಗಂಗಾ ಮಠ ಎಂದಾಕ್ಷಣ ಥಟ್ ಅಂತ ಕಣ್ಣೆದುರಿಗೆ ಬರುವುದು ಡಾ. ಶ್ರೀ ಶಿವಕುಮಾರ ಸ್ವಾಮೀಜಿಯರ ಸಾಮಾಜಿಕ ಸೇವಾ ಕಾರ್ಯಗಳು. ಪ್ರತಿದಿನ ೧೦ ಸಾವಿರಕ್ಕೂ ಅಧಿಕ ಬಡ ಮಕ್ಕಳಿಗೆ ಅನ್ನ, ಜ್ಞಾನ ದಾಸೋಹ ಹಂಚುವ ಪವಿತ್ರ ಕಾರ್ಯವನ್ನು ಮಾಡಿದ ಶ್ರೀಗಳು ದೇಶವಲ್ಲದೆ ಇಡೀ ಜಗತ್ತಿಗೆ ಆದರ್ಶಪ್ರಾಯ.
  ಸಿದ್ದಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗುತ್ತೇನೆ ಎನ್ನುವ ಕಲ್ಪನೆಯೇ ಇಲ್ಲದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಮೊದಲು ಸಿದ್ದಗಂಗಾ ಮಠದ ವಿದ್ಯಾರ್ಥಿಯಾಗಿದ್ದರು. ದಿನಾಂಕ: ೧-೪-೧೯೦೮ ರಂದು ಬೆಂಗಳೂರು ಜಿಲ್ಲೆ ಮಾಗಡಿ ತಾಲ್ಲೂಕಿನ ವೀರಾಪುರದ ವಾಸಿ ಪಟೇಲ್ ಹೊನ್ನಪ್ಪ ಮತ್ತು ಗಂಗಮ್ಮನವರ ಕೊನೆಯ ಮಗನಾಗಿ ಜನಿಸಿದ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ತಂದೆ-ತಾಯಿಗಳು ಶಿವಣ್ಣ ಎಂಬ ಹೆಸರಿಟ್ಟಿದ್ದರು. ಉತ್ತಮ ಮನೆತನದಲ್ಲಿ ಬೆಳೆದ ಬಂದ ಶಿವಣ್ಣನವರು ವೀರಾಪುರ ಮತ್ತು ಪುಟ್ಟಹಳ್ಳಿ, ಪಾಲನಹಳ್ಳಿಯ ಕೂಲಿಮಠದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ತಮ್ಮ ೮ನೇ ವಯಸ್ಸಿನಲ್ಲಿಯೇ ತಾಯಿ ಗಂಗಮ್ಮನವರನ್ನು ಕಳೆದುಕೊಂಡ ಅವರು, ಆ ನೋವಿನಲ್ಲಿಯೂ ವಿದ್ಯಾಭ್ಯಾಸ ಮುಂದುವರೆಸಿದರು. ಎ.ವಿ. ಸ್ಕೂಲ್‌ನ ಪ್ರತಿಭಾನ್ವಿತ ವಿದ್ಯಾರ್ಥಿ ಎಂದೇ ಗುರುತಿಸಲ್ಪಟ್ಟಿದ್ದ ಶಿವಣ್ಣನವರಿಗೆ ತಾಯಿ ಇಲ್ಲದ ಸ್ಥಾನದಲ್ಲಿ ಅವರ ಹಿರಿಯಕ್ಕ ಪುಟ್ಟಹೊನ್ನಮ್ಮ ವಿದ್ಯಾಭ್ಯಾಸ ಮುಂದುವರೆಸಲು ಪ್ರೋತ್ಸಾಹ ನೀಡಿದರು. ಶ್ರದ್ಧೆ, ಭಕ್ತಿ, ಶಿಸ್ತಿಗೆ ಹೆಸರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಯವರು ೧೯೧೯ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
  ತುಮಕೂರು ತಾಲ್ಲೂಕು ನಾಗವಲ್ಲಿ ಸರ್ಕಾರಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಶಿವಣ್ಣ ( ಶ್ರೀ ಶಿವಕುಮಾರ ಸ್ವಾಮೀಜಿ) ೧೯೨೨ ರಲ್ಲಿ ತುಮಕೂರಿನ ಸರ್ಕಾರಿ ಹೈಸ್ಕೂಲಿಗೆ ಸೇರಿದರು. ನಂತರ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
  ಕನಕಪುರ ದೇಗುಲ ಮಠಾಧ್ಯಕ್ಷರಾದ ಶ್ರೀ ಮಹಾಲಿಂಗ ಸ್ವಾಮಿಗಳ ಸಂಪರ್ಕದಿಂದ ಸಿದ್ದಗಂಗೆಗೆ ಬಂದು ಶ್ರೀಮಠದ ಉತ್ತರಾಧಿಕಾರಿಯಾಗಿ ನಿಯೋಜಿತರಾಗಿದ್ದ ಶ್ರೀ ಮರುಳರಾಧ್ಯರೊಂದಿಗೆ ಆತ್ಮೀಯತೆ ಹೊಂದಿದ್ದರು. ಈ ಸಂದರ್ಭದಲ್ಲಿ ತುಮಕೂರಿನಲ್ಲಿ ಪ್ಲೇಗ್ ರೋಗ ಹರಡಿದ್ದರಿಂದ ತುಮಕೂರು ಬಿಟ್ಟು ಸಿದ್ದಗಂಗೆಗೆ ವಾಸ್ತವ್ಯ ಬದಲಾಯಿಸಲು ತೀರ್ಮಾನಿಸಿ ಉದ್ದಾನ ಸ್ವಾಮಿಗಳಲ್ಲಿ ಶ್ರೀಮಠದಲ್ಲಿ ಆಶ್ರಯ ನೀಡಬೇಕೆಂದು ಕೋರಿದರು. ಉದ್ಧಾನ ಶ್ರೀಗಳು ಇದಕ್ಕೆ ಒಪ್ಪದಿದ್ದಾಗ ಶೆಟ್ಟಿಹಳ್ಳಿಯಲ್ಲಿ ಕೊಠಡಿ ಪಡೆದು ತಮ್ಮ ವ್ಯಾಸಂಗ ಮುಂದುವರೆಸಿದರು. ಇವರ ಕಷ್ಟ ತಿಳಿದ ಉದ್ಧಾನಶ್ರೀಗಳು ಶಿವಣ್ಣನವರನ್ನು ಕರೆಸಿಕೊಂಡು ಸಿದ್ದಗಂಗಾ ಮಠದಲ್ಲಿ ಆಶ್ರಯ ಕಲ್ಪಿಸಿದರಂತೆ.
  ಶ್ರೀಮಠದಲ್ಲಿ ಆಶ್ರಯ ಪಡೆದ ವೀರಾಪುರದ ಶಿವಣ್ಣನವರು ಉತ್ತಮ ವಿದ್ಯಾರ್ಥಿಯಾಗಿ ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ಕುಶಲ ವ್ಯಕ್ತಿಯೆನಿಸಿಕೊಂಡು ಶ್ರೀಮಠದ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ಸಿದ್ದಗಂಗಾ ಮಠದ ಎಲ್ಲಾ ವರ್ಗದವರ ಮನಗೆದಿದ್ದ ಶಿವಣ್ಣ ತುಮಕೂರಿನಲ್ಲಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬೆಂಗಳೂರಿನ ತೋಂಟದಪ್ಪನವರ ವಿದ್ಯಾರ್ಥಿನಿಲಯದಲ್ಲಿ ಇದ್ದುಕೊಂಡು ೧೯೨೭ ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು.
  ಪ್ರತಿನಿತ್ಯ ಶಿವಪೂಜೆ ಮಾಡಿಕೊಂಡು ದೈನಂದಿನ ಕಾರ್ಯಕ್ಕೆ ಮುಂದಾಗುತ್ತಿದ್ದರು. ವಿರಾಮ ಕಾಲದಲ್ಲಿ ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಚಿಂತನೆಗಳಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಉದ್ದಾನಶ್ರೀಗಳ ಆಧ್ಯಾತ್ಮ ವಿಚಾರಗಳು ಹಾಗೂ ಮರುಳಾರಾಧ್ಯರ ವಾತ್ಸಲ್ಯದಿಂದ ಶಿವಣ್ಣ ತುಂಬಾ ಪ್ರಭಾವಿತರಾಗಿದ್ದರು. ಸೆಂಟ್ರಲ್ ಕಾಲೇಜಿನಲ್ಲಿ ಶಿವಣ್ಣ ಓದಿದ್ದು ವಿಜ್ಞಾನ. ಜೀವನದಲ್ಲಿ ಅಳವಡಿಸಿಕೊಂಡಿದ್ದ ಆಧ್ಯಾತ್ಮಿಕ ವಿಷಯ.
  ಶಿವಣ್ಣನವರು ಪದವಿ ಪರೀಕ್ಷೆಗಾಗಿ ಸಿದ್ದತೆ ನಡೆಸುತ್ತಿದ್ದ ಸಂದರ್ಭದಲ್ಲೆ ಅವರ ಆತ್ಮೀಯ ಸ್ನೇಹಿತ ಮರುಳಾರಾಧ್ಯರು ಲಿಂಗೈಕ್ಯರಾದ ಸುದ್ದಿ ಶಿವಣ್ಣರವರನ್ನು ದುಃಖದ ಮಡುವಿನಲ್ಲಿ ಮುಳುಗಿಸಿತು. ದುಃಖ ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತು ಮನಸ್ಸನ್ನು ಹಗುರ ಮಾಡಿಕೊಂಡರಾದರೂ ಮರುಳಾರಾಧ್ಯರನ್ನು ಮರೆಯಲಾಗದೆ ತುಂಬಾ ನೋವಿಗೆ ಸಿಲುಕಿದರು. ನೋವಿನಿಂದ ಹೊರಬರಲು ಬಹಳ ದಿನಗಳೇ ಕಳೆದವು.
  ಅದೊಂದು ದಿನ ಮಠದ ಅಭಿಮಾನಿಗಳು, ಭಕ್ತವೃಂದ ಶಿವಣ್ಣರವರನ್ನು ಸಿದ್ದಗಂಗಾ ಮಠದ ಉತ್ತರಾಧಿಕಾರಿ ಸ್ಥಾನಕ್ಕೆ ಸೂಚಿಸಿಯೇ ಬಿಟ್ಟರು. ಈ ಸುದ್ದಿಯು ಶಿವಣ್ಣನವರಿಗೆ ಆಶ್ಚರ್ಯ ತಂದಿತಾದರೂ ಉದ್ಧಾನ ಶಿವಯೋಗಿಗಳು ಅದೊಂದು ದಿನ ಜನಸಾಗರದ ಮಧ್ಯೆ ಶಿವಣ್ಣನವರೆ ಶ್ರೀಮಠದ ಉತ್ತರಾಧಿಕಾರಿಗಳಾಗಿ ತಮ್ಮನ್ನು ನೇಮಿಸಬೇಕೆಂಬ ಅಭಿಪ್ರಾಯ ಬಂದಿದೆ. ತಾವು ಉತ್ತರಾಧಿಕಾರವನ್ನು ವಹಿಸಿಕೊಳ್ಳಿ. ಸಿದ್ದಲಿಂಗೇಶ್ವರರ ಪ್ರತಿನಿಧಿಯಾಗಿ ಈ ಕ್ಷೇತ್ರದ ಗುರುತರ ಹೊಣೆಯನ್ನು ಹೊರಬೇಕೆಂಬುದು ಭಕ್ತರ ಅಪೇಕ್ಷೆಯಾಗಿದೆ. ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಆಜ್ಞೆಯೂ ಆಗಿದೆ. ಈ ಬಗ್ಗೆ ಯೋಚಿಸಿ ತಾವು ನಿರ್ಧಾರ ಕೈಗೊಳ್ಳಿ ಎಂದರಂತೆ.
  ಶ್ರೀಗಳ ಸೂಚನೆಯಂತೆ ಹಾಗೂ ಭಕ್ತರ ಅಭಿಲಾಷೆಯಿಂದ ಶಿವಣ್ಣನವರು ಮರು ಮಾತನಾಡದೆ ಸಿದ್ದಗಂಗಾ ಮಠದ ಉತ್ತರಾಧಿಕಾರಿಗಳಾಗಲು ಒಪ್ಪಿಕೊಂಡು ಶ್ರೀಗಳಿಗೆ ತಲೆಬಾಗಿ ನಮಸ್ಕರಿಸಿದರು. ಆ ಕ್ಷಣದಿಂದ ಶಿವಣ್ಣ ಸಿದ್ದಗಂಗಾ ಕ್ಷೇತ್ರದ ಶ್ರೀ ಶಿವಕುಮಾರ ಸ್ವಾಮೀಜಿ ಎಂದು ಹೆಸರಾದರು.
  ೧೯೩೦ ರ ಮಾ. ೩ ರಂದು ಶ್ರೀ ಉದ್ಧಾನ ಶಿವಯೋಗಿಗಳು ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿ ಆಶೀರ್ವದಿಸಿದರು. ಅಂದಿನಿಂದ ೨೦೧೯ರ ಜನವರಿವರೆಗೂ ಸಿದ್ದಗಂಗಾ ಮಠದ ದೇವರಾಗಿ ಶ್ರೀಗಳು ಮಠಕ್ಕೆ ಸದ್ಬೆಳಕನ್ನು ಕರುಣಿಸುತ್ತಾ ಸಹಸ್ರಾರು ಮಕ್ಕಳಿಗೆ ಹಾಗೂ ನಾಡಿನ ಜನತೆಗೆ ನಡೆದಾಡುವ ದೇವರಾಗಿ, ಜ್ಯೋತಿಯಾಗಿ ಬೆಳಗಿದ್ದಾರೆ. ಶ್ರೀಗಳು ಲಿಂಗೈಕ್ಯರಾಗಿದ್ದರೂ ಅವರ ನಿಸ್ವಾರ್ಥ ಸೇವೆ, ಮಕ್ಕಳ ಮೇಲಿನ ಪ್ರೀತಿ, ಸಾಮಾಜಿಕ ಸೇವಾ ಕಾರ್ಯಗಳು ಸೂರ್ಯಚಂದ್ರರಿರುವವರೆಗೂ ಮರೆಯಾಗುವುದಿಲ್ಲ.