ಶ್ರೀಕ್ಷೇತ್ರ ಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.17: ತಾಲ್ಲೂಕಿನ ಇತಿಹಾಸ ಪ್ರಸಿದ್ದ ಶ್ರೀಗವಿರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ಶಾಸಕ ಹೆಚ್.ಟಿ.ಮಂಜು ದಂಪತಿಗಳು ಶ್ರೀ ಗವಿರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ರೈತರು ಧರಿಸುವ ರುಮಾಲನ್ನು ತಲೆಗೆ ಕಟ್ಟಿ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಈ ಪುಣ್ಯ ಕ್ಷೇತ್ರ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಪುರಾತನ ಕಾಲದಿಂದಲೂ ಗೋ ರಕ್ಷಕನಾಗಿರುವ ಗವಿರಂಗನಾಥಸ್ವಾಮಿ ರೈತರ ಬದುಕಿನ ಜೀವಾಳದಂತಿರುವ ದನಕರುಗಳ ಮೇಲೆ ತನ್ನ ಅಭಯವನ್ನು ನೀಡುತ್ತಾ ಬಂದಿದ್ದಾನೆ. ಇಲ್ಲಿಗೆ ಆಗಮಿಸಿ ದನಕರುಗಳ ಮೈಮೇಲೆ ತೀರ್ಥ ಸಿಂಪಡಿಸಿದರೆ ಅವುಗಳಿಗಿದ್ದ ರೋಗರುಜಿನಗಳು ನಿವಾರಣೆಯಾಗುತ್ತವೆ ಎಂಬ ಪ್ರತೀತಿ ಇದೆ. ಅದರಂತೆ ನಮ್ಮ ತಾಲ್ಲೂಕು, ಜಿಲ್ಲೆ ಸೇರಿದಂತೆ ವಿವಿಧ ಸ್ಥಳಗಳಿಂದ ಭಕ್ತರು ತಮ್ಮ ದನಕರುಗಳು ಅನಾರೋಗ್ಯಕ್ಕೆ ತುತ್ತಾದಾಗ, ಸಂತತಿ ವೃದ್ದಿಯಾದಾಗ ಹಾಗೂ ಪ್ರತಿ ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಜಾತ್ರೆಗೆ ಆಗಮಿಸುತ್ತಾರೆ. ಹಸು, ಎಮ್ಮೆ ಮುಂತಾದವುಗಳು ಕರು ಹಾಕಿದ ಕೂಡಲೇ ಮೊದಲು ಗವಿರಂಗನಾಥ ಸ್ವಾಮಿಗೆ ಎಡೆ ಅರ್ಪಿಸಿ ನಂತರ ರಾಸುಗಳ ಹಾಲನ್ನು ಬಳಸುತ್ತಾರೆ. ರಾಸುಗಳಿಗೆ ಶ್ರೀರಕ್ಷೆ ನೀಡುವ ಶ್ರೀ ಗವಿರಂಗನಾಥಸ್ವಾಮಿಗೆ ದೂರದ ಊರುಗಳಿಂದ ಆಗಮಿಸಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.
ಶ್ರೀ ಕ್ಷೇತ್ರವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸುವ ಕೆಲಸವನ್ನು ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ದಿಪಡಿಸಲು ಕ್ರಮಕೈಗೊಳ್ಳಲಾಗುವುದು. ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಲಾಗುತ್ತಿದ್ದು ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ವಿವಿಧ ಜಿಲ್ಲೆ, ತಾಲ್ಲೂಕುಗಳಿಂದ ರೈತರು ತಮ್ಮ ರಾಸುಗಳನ್ನು ಕರೆತರುತ್ತಾರೆ. ಶ್ರೀಗವಿರಂಗನಾಥಸ್ವಾಮಿ ಸರ್ವರಿಗೂ ಒಳ್ಳೆಯದನ್ನು ಮಾಡಲಿ. ಕಾಲಕಾಲಕ್ಕೆ ಮಳೆ, ಬೆಳೆ ಸಮೃದ್ದಿಯಾಗಿ ಆಗಲಿ. ರೈತರ ಮೊಗದಲ್ಲಿ ಸಂತಸ ಮೂಢಲಿ ಎಂದು ಶುಭಕೋರಿದರು.
ಜಿಲ್ಲೆಯ ವಿವಿಧ ಮೂಲೆಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಗವಿರಂಗನಾಥಸ್ವಾಮಿಯ ದರ್ಶನ ಪಡೆದು ಬ್ರಹ್ಮರಥಕ್ಕೆ ಹಣ್ಣುಜವನ ಎಸೆದು ಭಕ್ತಿಯಿಂದ ಇಷ್ಟಾರ್ಥಗಳನ್ನು ಪೂರೈಸುವಂತೆ ಕೋರಿಕೊಳ್ಳುತ್ತಿದ್ದರು.
ರಥೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಿಸರ್ಗಪ್ರಿಯ, ಸಂತೇಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿಕುಮಾರ್, ತಾಪಂ ಮಾಜಿಸದಸ್ಯ ಮೋಹನ್, ಉಪ ತಹಶೀಲ್ದಾರ್ ಗೌರಮ್ಮ, ರಾಜಸ್ವ ನಿರೀಕ್ಷಕ ಹರೀಶ್ ಸೇರಿದಂತೆ ಸಾವಿರಾರು ಭಕ್ತರು ಹಾಜರಿದ್ದರು.