ಶ್ರೀಕ್ಷೇತ್ರ ಕೈವಾರದಲ್ಲಿ ಪುರಂದರದಾಸರ ಆರಾಧನೋತ್ಸವ

ಕೋಲಾರ,ಜ,೨೨-ಪರಮಾತ್ಮನ ನಾಮಸ್ಮರಣೆಯನ್ನು ನಿರಂತರವಾಗಿ ಮಾನಸಿಕವಾಗಿ ಸ್ಮರಿಸುವವರು ಭಗವಂತನ ದಾಸರು. ಇಂತಹ ದಾಸಪಂಥವನ್ನು ಬೆಳೆಸಿದರು ಶ್ರೀಪುರಂದರದಾಸರು. “ಪುರಂದರದಾಸರು ದಾಸಪಂಥದ ಹರಿಕಾರರು” ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ಅಭಿಪ್ರಾಯಪಟ್ಟರು.
ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದ ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ಶ್ರೀಪುರಂದರದಾಸರ ಆರಾಧನೆಯ ಪ್ರಯುಕ್ತ ಆಯೋಜಿಸಲಾಗಿದ್ದ “ಪುರಂದರದಾಸೋತ್ಸವ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈವಾರ ತಾತಯ್ಯನವರು ದಾಸಪಂಥವನ್ನು ತಮ್ಮ ಕೀರ್ತನೆಗಳಲ್ಲಿ ಕೊಂಡಾಡಿದ್ದಾರೆ. ಕನಕದಾಸರ ಮನೆಯ ಕಸಗುಡಿಸೋ ಬಡದಾಸ, ಪುರಂದರದಾಸರಿಗೆ ಮಡಿಮಾಡೋದಾಸ ಎಂದು ವಿನಮ್ರವಾಗಿ ತಾತಯ್ಯನವರು ಕನಕದಾಸರು ಹಾಗೂ ಪುರಂದರದಾಸರನ್ನು ಸ್ಮರಿಸಿದ್ದಾರೆ. ಮಾನವಜನ್ಮದಲ್ಲಿ ಭಕ್ತನಾಗುವುದೇ ಶ್ರೇಷ್ಠವಾದುದು. ಭಕ್ತಿ ಮತ್ತು ಜ್ಞಾನ ಎರಡು ಒಂದೇ ಇದರಲ್ಲಿ ಯಾವುದೇ ಬೇಧವಿಲ್ಲ ಎಂದರು.
ಕೈವಾರ ಶ್ರೀಯೋಗಿನಾರೇಯಣ ನಾದಸುಧಾರಸ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ’ಕೈವಾರ ಕ್ಷೇತ್ರ ಸದ್ಗುರು ತಾತಯ್ಯನವರ ಪುಣ್ಯಕ್ಷೇತ್ರ. ಇಲ್ಲಿ ಪ್ರತಿವರ್ಷ ಗುರುಪೂರ್ಣಿಮೆಯಂದು ಶ್ರದ್ಧಾಭಕ್ತಿಗಳಿಂದ ಗುರುಪೂಜಾ ಸಂಗೀತೋತ್ಸವವು ನಡೆಯುತ್ತದೆ ಎಂದು ಹೇಳಿದರು.
ಈ ವರ್ಷದಿಂದ ಕರ್ನಾಟಕ ಸಂಗೀತದ ಪಿತಾಮಹರಾದ ಶ್ರೀ ಪುರಂದರದಾಸರ ಆರಾಧನೆಯನ್ನು ನೆರವೇರಿಸಲು ಸದ್ಗುರು ತಾತಯ್ಯನವರ ಕೃಪೆ ಹಾಗೂ ಧರ್ಮಾಧಿಕಾರಿಗಳ ಆದೇಶವಾಗಿದೆ. ಈ ನಿಟ್ಟಿನಲ್ಲಿ ನಾದಸುಧಾರಸ ವೇದಿಕೆಯಲ್ಲಿ ಪ್ರಪ್ರಥಮವಾಗಿ ಪುರಂದರದಾಸರ ಆರಾಧನೆಯ ಪ್ರಯುಕ್ತ ವಿದ್ವಾಂಸರುಗಳಿಂದ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು,
ಗರ್ಭಗುಡಿಯಲ್ಲಿ ಸದ್ಗುರು ತಾತಯ್ಯನವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ವೇದಿಕೆಯಲ್ಲಿ ಶ್ರೀಪುರಂದರದಾಸರ ಭಾವಚಿತ್ರಕ್ಕೆ ಅಷ್ಟೋತ್ತರ, ಪುಷ್ಪಾರ್ಚನೆಯನ್ನು ಸಮರ್ಪಿಸಲಾಯಿತು. ಮಂಗಳಾರತಿಯನ್ನು ಬೆಳಗಲಾಯಿತು.
ಕಾರ್ಯಕ್ರಮದಲ್ಲಿ ವಾನರಾಶಿ ಬಾಲಕೃಷ್ಣ ಭಾಗವತರ್, ಹರಿಕಥಾ ವಿದ್ವಾನ್ ಜ್ಞಾನಮೂರ್ತಿ, ಭೈರತಿ ಆಂಜಿನಪ್ಪ, ಚಿಂತಲಪಲ್ಲಿ ಸೋಮಶೇಖರ್, ಅಶ್ವಿನಿ ಮೋಹನ್, ವಿದ್ಯಾ ಮತ್ತು ಲತಾ, ಕೈವಾರ ಡಾ||ಶ್ರೀನಿವಾಸ್, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೈವಾರ ರಾಮಣ್ಣ, ಜಾನಪದ ಪರಿಷತ್‌ನ ತಾಲ್ಲೂಕು ಅಧ್ಯಕ್ಷೆ ಲೀಲಾಲಕ್ಷ್ಮೀನಾರಾಯಣ್, ಸಾಯಿಲತಾ ತಂಡ, ಅಮೃತವರ್ಷಿನಿ ತಂಡ, ಲಾವಣ್ಯ ಮುಂತಾದವರು ಪುರಂದರದಾಸರ ಕೀರ್ತನೆಗಳ ಗಾಯನವನ್ನು ಸಮರ್ಪಿಸಿದರು
. ಎ.ವಿ.ವಿಶ್ವನಾಥ್ ತಂಡದವರು ಹಾರ್ಮೋನಿಯಂ ಸೋಲೋ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪಕ್ಕವಾದ್ಯಗಳಲ್ಲಿ ಕೈವಾರ ಕೆ.ರಾಮಕುಮಾರ್,ಪಾಕಾಲ ಹೇಮಕುಮಾರ್, ಕೊಡಿಚೆರವು ನಾರಾಯಣಪ್ಪ, ಬ್ಯಾಲಹಳ್ಳಿ ಲಕ್ಷ್ಮೀನಾರಾಯಣಪ್ಪ, ಪೆದ್ದೂರು ನಾರಾಯಣಸ್ವಾಮಿ, ಕೋಲಾರ ರವಿಚಂದ್ರ, ಎ.ವಿ.ಶ್ರೀಹರಿ, ಶಶಿಕುಮಾರ್ ಸಹಕರಿಸಿದರು.