ಶ್ರೀಕಿಯಿಂದ ಕಾಂಗ್ರೆಸ್ ಪುತ್ರರಿಗೆ ಡ್ರಗ್ಸ್ ಪೂರೈಕೆ ; ಜ್ಞಾನೇಂದ್ರ

ಕಲಬುರಗಿ,ನ.೨೦- ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಪ್ರಕರಣ ಕುರಿತಂತೆ ಬಿಜೆಪಿ-ಕಾಂಗ್ರೆಸ್ ನಡುವಣ ವಾಕ್ಸಮರ ತಾರಕಕ್ಕೇರಿದೆ. ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ, ಕಾಂಗ್ರೆಸ್ ಮುಖಂಡರ ಮಕ್ಕಳಿಗೆ ಡ್ರಗ್ಸ್ ತರಿಸಿಕೊಡುತ್ತಿದ್ದು, ಗೋವಾ ಕಾಂಗ್ರೆಸ್ ಮುಖಂಡರ ಜತೆಗೆ ಕಾಣಿಸಿಕೊಂಡಿದ್ದ ಎಂದು ಗೃಹ ಸಚಿವ ಅರಗ
ಜ್ಞಾನೇಂದ್ರ ಆರೋಪಿಸಿದ್ದಾರೆ.
ಈ ಬಿಟ್ ಕಾಯಿನ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಶ್ರೀಕಿ ಜತೆ ಇರುವ ಭಾವಚಿತ್ರವನ್ನು ಬಿಜೆಪಿ ಬಿಡುಗಡೆ ಮಾಡಿದ್ದ ಬೆನ್ನಲ್ಲೆ ಗೃಹ ಸಚಿವರು ಈ ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶ್ರೀಕಿಯನ್ನು ಹಿಡಿದು ತನಿಖೆ ಮಾಡುತ್ತಿರುವುದೇ
ತಪ್ಪು ಎಂಬ ಅರ್ಥದಲ್ಲಿ ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರದರ್ಶಕ ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ತಲೆದಂಡವಾಗಲಿದೆ ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕ್ ಪಾಂಡಿತ್ಯ ಪ್ರದರ್ಶನ ಮಾಡುತ್ತಿದ್ದಾರೆ. ಅವರು ಐಟಿ-ಬಿಟಿ ಸಚಿವರಾಗಿದ್ದಾಗ ಶ್ರೀಕಿಯನ್ನು ಏಕೆ ಬಂಧಿಸಿಲ್ಲ. ಅವನು ಹ್ಯಾಕರ್ ಎಂದು ಗೊತ್ತಾಗಲಿಲ್ಲವೇ? ಗೃಹ ಸಚಿವರು ಐಟಿ-ಬಿಟಿ ಸಚಿವರಿಗೆ ಮಾಹಿತಿ ಇದ್ದರೂ ಏಕೆ ಶ್ರೀಕಿಯನ್ನು ಬಂಧಿಸಿಲ್ಲ ಎಂದು ಪ್ರಶ್ನೆಗಳ ಸುರಿಮಳೆಗೈದರು.