ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಶಾಸಕರ ಅಭಿವೃದ್ಧಿ ಪರಿಶೀಲನಾ ಸಭೆ

ಸಂಜೆವಾಣಿ ವಾರ್ತೆ
ನಂಜನಗೂಡು:ಜ.25: ದಕ್ಷಿಣಕಾಶಿ ಪವಿತ್ರ ಪುಣ್ಯಕ್ಷೇತ್ರವೆನಿಸಿರುವ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದಾಸೋಹ ಭವನದ ಸಭಾಂಗಣದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ರವರು ಪ್ರಪ್ರಥಮವಾಗಿ ದೇವಸ್ಥಾನದ ಅಭಿವೃದ್ಧಿಗಳ ಮತ್ತು ಅಲ್ಲಿನ ನೌಕರರ ಕಾರ್ಯವೈಖರಿಗಳ ಬಗ್ಗೆ ಸುಧೀರ್ಘವಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ರಾಜ್ಯಾದ್ಯಂತ ಭಕ್ತಾಧಿಗಳು ಆಗುಮಿಸುತ್ತಿದ್ದು ಇಲ್ಲಿನ ಆದಾಯವು ಕೂಡ ಹೆಚ್ಚಾಗಿರುವ ಹಿನ್ನಲೆಯಲ್ಲಿ ಬರುವ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ದೇವಾಲಯದ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲು ಸಂಬಂಧಪಟ್ಟವರು ಹೆಚ್ಚಿನ ಗಮನ ಹರಿಸ ಬೇಕೆಂದು ದೇವಾಲಯದ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ದೇವಸ್ಥಾನದ ವ್ಯಾಪ್ತಿಯಲ್ಲಿ ನೈರ್ಮಲ್ಯ ಹೆಚ್ಚಿಸಿ ಪರಿಸರ ಕಾಪಾಡಲು ಪ್ರತ್ಯೇಕವಾದ ಯುಜಿಡಿ, ವ್ಯವಸ್ಥೆಯನ್ನು ಕಲ್ಪಿಸಲು ಚರ್ಚೆ ನಡೆಸಿದರು. ಅದೇ ರೀತಿ ಭಕ್ತರು ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ದೇವಸ್ಥಾನದ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುವುದು. ಗೋಶಾಲೆ ಸ್ಥಾಪಿಸಿ ಗೋವುಗಳನ್ನು ಸಂರಕ್ಷಿಸುವುದು, ಕಪಿಲಾ ನದಿಯಿಂದ ದೇವಸ್ಥಾನಕ್ಕೆ ಈಗಾಗಲೇ ನಿರ್ಮಿಸಿರುವ ಸುರಂಗ ಮಾರ್ಗವನ್ನು ಅಭಿವೃದ್ದಿ ಪಡಿಸಿ ವಿದ್ಯುತ್ ಸೌಲಭ್ಯ ಮತ್ತು ಭದ್ರತಾ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಚರ್ಚೆ ನಡೆಸಿ ಉನ್ನತ ಮಟ್ಟದ ಸಭೆಯಲ್ಲಿ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದೇವಾಲಯದ ನಾಲ್ಕು ದಿಕ್ಕುಗಳಲ್ಲಿ ಕಮಾನುಗಳನ್ನು ನಿರ್ಮಿಸಲು ಈಗಾಗಲೇ ಕಾಮಗಾರಿ ಪ್ರಾರಂಭವಾಗಿ ಅರ್ಧಕ್ಕೆ ನಿಂತಿದ್ದು ಅದನ್ನು ಪೂರ್ಣಗೊಳಿಸುವಂತೆ ಟೆಂಡರ್‍ದಾರರಿಗೆ ಸೂಚಿಸಿದರು.
ನದಿಯ ನೀರು ಸ್ನಾನಘಟ್ಟದಲ್ಲಿ ಸರಾಗವಾಗಿ ಹರಿಯದೆ ಜೊಂಡುಗಳು ಬೆಳೆದು ತ್ಯಾಜ್ಯಗಳೆಲ್ಲ ಸ್ನಾನಘಟ್ಟದಲ್ಲಿ ಶೇಖರವಾಗುತ್ತಿದ್ದು ಇದರಿಂದ ನದಿಯ ನೀರು ಮಲಿನವಾಗುತ್ತಿರುವುದನ್ನು ಸಭೆಯಲ್ಲಿ ತೀವ್ರವಾಗಿ ಚರ್ಚಿಸಿ ಸೋಪಾನೆಕಟ್ಟೆ ನಿರ್ಮಾಣ ಮಾಡಿ ನದಿಯಲ್ಲಿ ಬೆಳೆದಿರುವ ಜೊಂಡನ್ನು ತೆಗೆಸಿ ನಿಂತಿರುವ ನೀರು ಸರಾಗವಾಗಿ ಹೋಗುವಂತೆ ಮಾಡಲು ನೀರಾವರಿ ಮತ್ತು ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚಿಸಿದರು.
ದೇವಸ್ಥಾನದ ಸುತ್ತಲೂ ಮತ್ತು ಮುಖ್ಯ ರಸ್ತೆಗಳಲ್ಲಿ ವಿದ್ಯುತ್ ಇಲ್ಲದೆ ಕತ್ತಲಾಗಿರುವ ಹಿನ್ನಲೆಯಲ್ಲಿ ಹೈಮಾಸ್ಕ್ ಮತ್ತು ವಿದ್ಯುತ್ ದೀಪಗಳನ್ನು ಅಳವಡಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳಿಗೆ ಆದೇಶಿಸಿದರು.
ದೇವಾಲಯದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ 75 ಕೊಠಡಿಗಳ ನಿರ್ಮಾಣ, ವಿಐಪಿ ಅತಿಥಿಗೃಹ, ಡಾರ್ಮೆಟರಿ ಕಟ್ಟಡ ನಿರ್ಮಾಣಗಳ ಬಗ್ಗೆ ಶಾಸಕರು ಚರ್ಚೆ ನಡೆಸಿ ಈಗಾಗಲೇ ದೇವಾಲಯದ ಮುಂಭಾಗದಲ್ಲಿ ವಿಐಪಿ ಸೇರಿದಂತೆ ಹಲವಾರು ಕೊಠಡಿಗಳು ಉಪಯೋಗವಿಲ್ಲದೆ ಖಾಲಿ ಬಿದ್ದಿದ್ದು ಅವುಗಳನ್ನು ಉಪಯೋಗಿಸಿಕೊಂಡು ತದನಂತರ ಕೊಠಡಿಗಳ ಅವಶ್ಯಕತೆ ಇದ್ದರೆ ನಿರ್ಮಾಣ ಮಾಡುವ ಬಗ್ಗೆ ಯೋಚಿಸೋಣ ಎಂದು ಹಿಂದಿನ ಸರ್ಕಾರದ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾಗಿದ್ದ ಕಾಮಗಾರಿಗಳ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸಿದರು. ಕಪಿಲಾ ನದಿ ತೀರದಲ್ಲಿ ಹೈಟೆಕ್ ಶೌಚಾಲಯ, ಬಟ್ಟೆ ಬದಲಾಯಿಸುವ ಕೊಠಡಿಗಳ ಬಗ್ಗೆ ಅಂದಾಜು ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ರವರು ಮಾತನಾಡಿ ದೇವಾಲಯಕ್ಕೆ ಆಗಮಿಸಿರುವ ಭಕ್ತಾಧಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಸತಿ ಸೌಕರ್ಯಕ್ಕಾಗಿ ಗಿರಿಜಾ ಕಲ್ಯಾಣ ಮಂದಿರದಲ್ಲಿ 24 ಕೊಠಡಿಗಳು ಹಾಗೂ ಡಾರ್ಮೆಟರಿ ಕಟ್ಟಡದಲ್ಲಿ 32 ಕೊಠಡಿಗಳ ವ್ಯವಸ್ಥೆ ಮತ್ತು ವಿಐಪಿ ಕಾಟೇಜ್ ಇದ್ದು, ಸರತಿ ಸಾಲಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಉಚಿತ ದಾಸೋಹ ವ್ಯವಸ್ಥೆ, ಸರತಿ ಸಾಲಿನಲ್ಲಿ ಫ್ಯಾನ್‍ಗಳ ವ್ಯವಸ್ಥೆ ಅಳವಡಿಸಿದ್ದು. ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪಾದರಕ್ಷೆ ಸ್ಟಾಂಡ್, ವಾಹನ ನಿಲುಗಡೆ ವ್ಯವಸ್ಥೆ ಮತ್ತು ಶಿಶುವಿನೊಂದಿಗೆ ಬರುವ ತಾಯಂದಿರಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ, ವಯಸ್ಸಾದವರಿಗೆ ಮತ್ತು ಅಂಗವಿಕಲರಿಗೆ ನೇರ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಕರ್ತವ್ಯದ ಬಗ್ಗೆ ಅರಿವು ಮೂಡಿಸಿದ ದರ್ಶನ್ ಧ್ರುವ
ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರ ಕರ್ತವ್ಯಗಳ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಸಿದ ಶಾಸಕ ದರ್ಶನ್ ಧ್ರುವನಾರಾಯಣ್ ರವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ದೇವಾಲಯದಲ್ಲಿ ಒಳಾಂಗಣ ಮತ್ತು ಹೊರಾಂಗಣ ಹುದ್ದೆಗಳಿದ್ದು ಒಟ್ಟು 238 ನೌಕರರಲ್ಲಿ 179 ಜನ ದೇವಾಲಯದ ಸಿಬ್ಬಂದಿ ವರ್ಗದವರು ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ ಎಂದ ಅವರು ಒಳಾಂಗಣ ಹುದ್ದೆಯಲ್ಲಿ 15 ಮಂದಿ, ಹೊರಾಂಗಣ ಹುದ್ದೆಯಲ್ಲಿ 43 ಮಂದಿ, ಒಟ್ಟು 58 ಹುದ್ದೆಗಳು ಖಾಲಿ ಇದ್ದು ಇದರಲ್ಲಿ 09 ಹುದ್ದೆಗಳು ವಂಶಪಾರಂಪರ್ಯಗಳಾಗಿರುತ್ತವೆ. 06 ಹುದ್ದೆಗಳು ಸರ್ಕಾರಿ ಬದಲಿ ಹುದ್ದೆಗಳಾಗಿರುತ್ತವೆ. 43 ಹುದ್ದೆಗಳು ಹೊರಾಂಗಣದ ವಿವಿಧ ಹುದ್ದೆಗಳಾಗಿರುತ್ತದೆ ಎಂದು ಖಾಲಿ ಇರುವ ಹುದ್ದೆಗಳ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ರವರು ಸಂಪೂರ್ಣ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ರವರು ಮಾತನಾಡಿ ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಮತ್ತು ಇಲ್ಲಿನ ಭದ್ರತಾ ಸಿಬ್ಬಂದಿ ಯವರು ತಮ್ಮ ಕರ್ತವ್ಯ ಯಾವುದು ಎಂಬುದನ್ನು ತಿಳಿಯದೆ ಅವರು ಇಷ್ಟಾಬಂದ ಕಡೆ ಕರ್ತವ್ಯ ನಿರ್ವಹಿಸುತ್ತಾರೆ ಇದು ನಿಲ್ಲಬೇಕು ತಮ್ಮ ಹುದ್ದೆಯ ಬಗ್ಗೆ ಅರಿತು ಕರ್ತವ್ಯ ನಿರ್ವಹಿಸಬೇಕು ಇದನ್ನು ತಕ್ಷಣ ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯರೂಪಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಒಟ್ಟಾರೆ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಅಭಿವೃದ್ದಿಗಾಗಿ ಮತ್ತು ಭಕ್ತರ ಅನುಕೂಲಕ್ಕಾಗಿ ಸಕಲ ಸವಲತ್ತುಗಳನ್ನು ನೀಡುವತ್ತ ಗಮನಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧಿಕಾರಿ ಮೈತ್ರಾವತಿ, ಅರ್ಪಿತ್, ನಗರಸಭಾ ಸದಸ್ಯರಾದ 23 ನೇ ವಾರ್ಡ್‍ನ ಯೋಗೇಶ್, 5ನೇ ವಾರ್ಡ್‍ನ ಯೋಗೀಶ್, ಕೆಇಬಿ ಅಧಿಕಾರಿಗಳಾದ ಆನಂದ್, ದೇವರಾಜ್, ಕಿರಣ್‍ಕುಮಾರ್, ದೇವಸ್ಥಾನದ ಎಇಒ ಸತೀಶ್, ಇಂಜಿನಿಯರ್ ರವಿಕುಮಾರ್, ಪಿಡಬ್ಲೂಡಿ, ನೀರಾವರಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.