ಶ್ರೀಅಡವೀಶ್ವರ ಶಿವಯೋಗಿಗಳ ರಥೋತ್ಸವ ಅದ್ದೂರಿ

ದೇವದುರ್ಗ,ಏ.೦೯- ತಾಲೂಕಿನ ಆರಾಧ್ಯ ದೈವ ಮಲದಕಲ್ ಗ್ರಾಮದ ಶ್ರೀಅಡವೀಶ್ವರ ಶಿವಯೋಗಿಗಳ ೩೦ನೇ ಜಾತ್ರಾ ಮಹೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು.
ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಪೀಠಾಧಿಪತಿ ಶ್ರೀಶಂಭುಲಿಂಗ ಶಿವಯೋಗಿಗಳ ಸಾನ್ನಿಧ್ಯದಲ್ಲಿ ಎರಡು ದಿನಗಳಿಂದ ನಾನಾ ಧಾರ್ಮಿಕ, ಪೂಜಾ ಕೈಂಕಾರ್ಯಗಳು ಜರುಗಿದವು. ಬುಧವಾರ ಬೆಳಗ್ಗೆ ವಿಶೇಷ ಪೂಜೆ ಜತೆಗೆ ಉಚ್ಚಾಯ ಮಹೋತ್ಸವ ಜರುಗಿತು. ಗುರುವಾರ ಶ್ರೀಅಡವೀಶ್ವರ ಶಿವಯೋಗಿಗಳ ಶಿವಮೂರ್ತಿಗೆ ಶಂಕ್ರಯ್ಯ ಸ್ವಾಮಿ ಸಾಲಿಮಠ, ನಾಗಯ್ಯಸ್ವಾಮಿ ಸಾಲಿಮಠ ನೇತೃತ್ವದಲ್ಲಿ ಮಹಾರುದ್ರಾಭಿಷೇಕ, ರಥೋತ್ಸವಕ್ಕೆ ಕಳಸ ಪ್ರತಿಷ್ಠಾಪನೆ ನೆರವೇರಿತು.
ನಂತರ ಮಧ್ಯಾಹ್ನ ೩ಗಂಟೆಗೆ ಶ್ರೀಅಡವೀಶ್ವರ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ ಶ್ರೀವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀಮಠದವರೆಗೆ ಅದ್ದೂರಿಯಾಗಿ ಜರುಗಿತು. ಮೆರವಣಿಗೆಯಲ್ಲಿ ನಂದಿಕೋಲು, ಪಲ್ಲಕ್ಕಿ ಸೇವೆ, ಪುರವಂತಿಕೆ, ಭಜನಾ ಮೇಳದೊಂದಿಗೆ ಜರುಗಿತು. ಶನಿವಾರ ಸಂಜೆ ೫.೩೦ಕ್ಕೆ ಮಹಾರಥೋತ್ಸವ ಸಾವಿರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವ ನಿಮಿತ್ತ ರಂಗೋಲಿ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.