ಶ್ರಾವಣ ಸೋಮವಾರ, ಪಂಚಮಿ: ಶರಣ ದೇಗುಲಕ್ಕೆ ಭಕ್ತರ ದರ್ಶನ

ಕಲಬುರಗಿ,ಆ.1: ಶ್ರಾವಣ ಸೋಮವಾರ ಹಾಗೂ ಪಂಚಮಿ ಹಬ್ಬದ ನಿಮಿತ್ಯ ಸೋಮವಾರ ನಗರದ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರ ಶ್ರೀ ಶರಣಬಸವೇಶ್ವರ್ ದೇವಸ್ಥಾನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದು ಪುನೀತರಾದರು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಶ್ರಾವಣ ತಿಂಗಳನ್ನು ಶೃದ್ಧಾ ಭಕ್ತಿಯಿಂದ ಆಚರಿಸುವುದಕ್ಕೆ ಅಡಚಣೆಯಾಗಿತ್ತು. ಈ ಬಾರಿ ಕೋವಿಡ್ ನಿಯಂತ್ರಣವಾಗಿದ್ದರಿಂದ ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನದ ಆವರಣಕ್ಕೆ ಬಂದು ಸರದಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿದರು.
ಬೆಳಿಗ್ಗೆಯಿಂದಲೇ ಬರಿಗಾಲಿನಲ್ಲಿ ದೇವಸ್ಥಾನಕ್ಕೆ ಬಂದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಇಡೀ ದೇವಸ್ಥಾನದ ಆವರಣವು ಭಕ್ತರಿಂದ ತುಂಬಿ ತುಳುಕುತ್ತಿತ್ತು. ಅದರಲ್ಲಿಯೂ ಪಂಚಮಿ ಹಬ್ಬ ಬಂದಿದ್ದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆದರು.
ಶ್ರಾವಣ ಸೋಮವಾರದಂದು ಕೇವಲ ನಗರ ಹಾಗೂ ಜಿಲ್ಲೆಯವರು ಅಲ್ಲದೇ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದವರೂ ಸಹ ಆಗಮಿಸಿದ್ದರು. ವಿವಿಧ ಭಜನಾ ತಂಡಗಳು ಭಜನೆ ಮಾಡುವ ಮೂಲಕ ಭಕ್ತಿಭಾವ ಮೆರೆದರು.