ಶ್ರಾವಣ ಮಾಸ ನಿಮಿತ್ಯ ಪ್ರವಚನ ಕರಪತ್ರ ಬಿಡುಗಡೆ

ಬೀದರಃ ಆ.9:ನಗರದ ಡಾ|| ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಸೋಮವಾರ ಸಂಜೆ 6.00 ಗಂಟೆಗೆ ಶ್ರಾವಣ ಮಾಸದ ನಿಮಿತ್ಯ ಪ್ರವಚನ ಕರಪತ್ರ ಬಿಡುಗಡೆ ಸಮಾರಂಭ ಜರುಗಿತು. ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಜನವಾಡ ಧಾರವಾಡರವರಿಂದ ಇದೇ ಆಗಷ್ಟ 17 ರಿಂದ ಸಪ್ಟೆಂಬರ್ 16, 2023 ರ ವರೆಗೆ ಪ್ರತಿ ದಿನ ಸಾಯಂಕಾಲ 6.00 ಗಂಟೆಯಿಂದ ಪ್ರವಚನ ಜರುಗಲಿದೆ.

2023ನೇ ಸಾಲಿನ ಶ್ರಾವಣ ಮಾಸ ಪ್ರವಚನ ಸಮಿತಿಯ ಅಧ್ಯಕ್ಷರಾದ ಶರಣೆ ಶಕುಂತಲಾ ಬೆಲ್ದಾಳೆಯವರು ಪ್ರವಚನ ಕರಪತ್ರ ಬಿಡುಗಡೆ ಮಾಡಿ ಮಾತನಾಡುತ್ತ, ಮನುಷ್ಯನ ಬದುಕಿನ ಜಂಜಾಟದಿಂದ ಹೊರಬಂದು ಶರಣ, ಸಂತರ, ಮಹಾನುಭಾವರ ಸತ್ಸಂಗದಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ. ಜಗತ್ತಿನಲ್ಲಿ ಅನೇಕ ಧರ್ಮಗಳು ತಮ್ಮದೇ ಪರಂಪರೆಯಿಂದ ಉಪವಾಸ, ವ್ರತಗಳು, ಮತ್ತು ಧರ್ಮಗ್ರಂಥವನ್ನು ಪಠಣ ಮಾಡುತ್ತಾರೆ. ಹಾಗೆಯೇ ಭಾರತೀಯ ಸಂಸ್ಕøತಿಯಲ್ಲಿ ಶ್ರಾವಣ ಮಾಸ ಪವಿತ್ರ ಮಾಸವಾಗಿದೆ. ಈ ತಿಂಗಳಿನಲ್ಲಿ ಉಪವಾಸ ಮಾಡುವುದು, ದೇವರ ನಾಮಸ್ಮರಣೆ ಮತ್ತು ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ.

ಈ ಹಿನ್ನಲೆಯಲ್ಲಿ ಪೂಜ್ಯರಾದ ಡಾ|| ಬಸವಲಿಂಗ ಪಟ್ಟದ್ದೇವರು ಶ್ರಾವಣ ಮಾಸ ನಿಮಿತ್ಯ ಇಡೀ ಬೀದರ ಜಿಲ್ಲೆ ಮತ್ತು ಗಡಿ ರಾಜ್ಯ ತೆಲಂಗಾಣದ 25 ಸ್ಥಳಗಳಲ್ಲಿ ಶರಣರ ವಚನ ದರ್ಶನ ಪ್ರವಚನ ಕಾರ್ಯಕ್ರಮ ನಡೆಸುವ ನಿರ್ಧಾರ ತೆಗೆದುಕೊಂಡಿರುತ್ತಾರೆ. ಬೀದರನ ಪ್ರಸಾದ ನಿಲಯದಲ್ಲಿ ಶರಣರ ವಚನ ದರ್ಶನ ಪ್ರವಚನವನ್ನು ಹೆಸರಾಂತ ಪ್ರವಚನಕಾರರಾದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಜನವಾಡ ಧಾರವಾಡ ನಡೆಸಿಕೊಡುವರು. ಈ ಪ್ರಯುಕ್ತ ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ನಿರಂತರವಾಗಿ ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯದ ಮಕ್ಕಳಿಂದ ಶರಣರ ಚಿಂತನೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ|| ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದ ಪ್ರಮುಖರಾದ ಪ್ರೊ. ಉಮಾಕಾಂತ ಮೀಸೆಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಮತ್ತು ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರ ಸಲಹೆ ಮೇರೆಗೆ ಪ್ರವಚನವು ಶಿಸ್ತಿನಿಂದ ಅರ್ಥಪೂರ್ಣವಾಗಿ ನಡೆಸಲು ಸಕಲ ಸದ್ಭಕ್ತರು ಸಹಾಯ ಸಹಕಾರ ನೀಡಬೇಕೆಂದು ಪೂಜ್ಯರ ವಿಚಾರದಂತೆ ಬಸವತತ್ವವು ಮನೆ ಮನಕ್ಕೂ, ರಾಜ್ಯ ರಾಷ್ಟ್ರಮಟ್ಟಕ್ಕೂ ಮುಟ್ಟುವಂತಹ ಕಾರ್ಯವಾಗಬೇಕೆಂಬುದು ಅವರ ಅಂತರಂಗದ ಮಿಡಿತವಾಗಿದೆ ಎಂದರು. ಈ ಹಿನ್ನಲೆಯಲ್ಲಿ ಶ್ರಾವಣ ಮಾಸದಲ್ಲಿ ಮಕ್ಕಳಿಗಾಗಿ ವಚನ ಕಂಠಪಾಠ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಏರ್ಪಡಿಸಲಾಗುವುದು.

ಆದುದರಿಂದ ಬೀದರನ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಚನಕ್ಕೆ ಆಗಮಿಸಿ ಬದುಕು ಸಾರ್ಥಕ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸಂಗ್ರಾಮಪ್ಪ ಬಿರಾದಾರ, ಯೋಗೇಂದ್ರ ಯದಲಾಪೂರೆ, ಮಹಾರುದ್ರ ಡಾಕುಳಗಿ, ಗುರುನಾಥ ಬಿರಾದಾರ, ಸಂಗಮೇಶ ಬಿರಾದಾರ, ಶ್ರೀಕಾಂತ ಸ್ವಾಮಿ, ಅಕ್ಕಮಹಾದೇವಿ ಮಹಿಳಾ ಸಾಂಸ್ಕøತಿಕ ಸಂಘದ ಅಧ್ಯಕ್ಷೆ ಮೀನಾಕ್ಷಿ ಪಾಟೀಲ್ ಹಾಗೂ ಪದಾಧಿಕಾರಿಗಳು, ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯದ ಮಕ್ಕಳು ಹಾಗೂ ಭಕ್ತರು ಭಾಗವಹಿಸಿದರು.