ಶ್ರಾವಣ ಅಮಾವಾಸ್ಯೆ: ಶರಣಬಸವೇಶ್ವರರ ದೇವಸ್ಥಾನಕ್ಕೆ ಭಕ್ತರ ದಂಡು

ಕಲಬುರಗಿ,ಆ.16:ಶ್ರಾವಣ ಮಾಸ ಆರಂಭಗೊಂಡಿದೆ. ಆ ಹಿನ್ನೆಲೆಯಲ್ಲಿ ಬುಧವಾರದಂದು ಅಮಾವಾಸ್ಯೆ ಇದ್ದುದರಿಂದ ನೂರಾರು ಭಕ್ತರು ನಗರದ ಪ್ರಸಿದ್ಧ ಶ್ರೀ ಶರಣಬಸವೇಶ್ವರರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು.
ಬೆಳಂಬೆಳಿಗ್ಗೆಯೇ ದೇವಸ್ಥಾನದತ್ತ ಆಗಮಿಸಿದ ಭಕ್ತರು ಉದ್ದನೆಯ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಮಹಿಳೆಯರು ಹಾಗೂ ಪುರುಷರು ಸಹ ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಕ್ಕೆ ಆಗಮಿಸಿದ್ದರು.
ನಗರದ ವಿವಿಧ ಬಡಾವಣೆಗಳಿಂದ ನಡೆದುಕೊಂಡೇ ಬಂದ ಭಕ್ತರು ದರ್ಶನ ಪಡೆದು ಎಡೆ ಕೊಟ್ಟು ಪುನೀತರಾದರು. ನಾಡಿನ ಉದ್ದಗಲಕ್ಕೂ ಶ್ರೀ ಶರಣಬಸವೇಶ್ವರರ ಭಕ್ತರು ಇರುವುದರಿಂದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಶ್ರಾವಣ ತಿಂಗಳಿನಲ್ಲಿ, ಅದೂ ಅಮಾವಾಸ್ಯೆ ಮತ್ತು ಸೋಮವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯುವ ವಾಡಿಕೆಯನ್ನು ಹೊಂದಿದ್ದಾರೆ.
ಶರಣಬಸವೇಶ್ವರರ ಸಂಸ್ಥಾನವೂ ಸಹ ಶ್ರಾವಣ ನಿಮಿತ್ಯ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿಂದ ದೇವಸ್ಥಾನದ ಆವರಣದಲ್ಲಿ ಭಕ್ತಿ ಭಾವವು ನಿರ್ಮಾಣಗೊಂಡಿದೆ. ಕೋವಿಡ್ ಸೋಂಕಿನ ಯಾವುದೇ ಭಯ ಇರದೇ ಇರುವುದರಿಂದ ಭಕ್ತರು ಯಾವುದೇ ಅಡ್ಡಿ, ಆತಂಕಗಳನ್ನು ಹೊಂದದೇ ಭಕ್ತಿ ಭಾವದಿಂದ ಶರಣ ದೇಗುಲದ ದರ್ಶನ ಪಡೆದ ದೃಶ್ಯ ಸಾಮಾನ್ಯವಾಗಿತ್ತು.