ಶ್ರವಣ ಕಾಳಜಿ ಅತ್ಯವಶ್ಯ: ಡಾ. ಬಳ್ಳಾರಿ


ಗದಗ, ಮಾ. 6 : ಕಿವಿ ಕೇಳಿಸದವರಿಗೆ ಜಗತ್ತೇ ನಿಶಬ್ದವಾದಂತೆ. ಕಿವುಡತನದಿಂದ ಮೂಗತನವೂ ಬರುವ ಸಾಧ್ಯತೆಗಳಿವೆ ಆದ್ದರಿಂದ ನಾವು ಕಿವಿಯನ್ನು ಹೆಚ್ಚು ಕಾಳಜಿಯಿಂದ ರಕ್ಷಿಸಿಕೊಳ್ಳುವು ಅವಶ್ಯವಿದೆ ಎಂದು ಗದುಗಿನ ಕಣ್ಣು, ಮೂಗು, ಗಂಟಲು ತಜ್ಞರಾದ ಡಾ.ಚಂದ್ರಶೇಖರ ಆರ್.ಬಳ್ಳಾರಿ ಅಭಿಪ್ರಾಯಪಟ್ಟರು.
ಅವರು ವಿಶ್ವ ಶ್ರವಣ ದಿನದ ಅಂಗವಾಗಿ ಗದುಗಿನ ರಾಜರಾಜೇಶ್ವರಿ ಕಿವಿ, ಮೂಗು, ಗಂಟಲು ಕಣ್ಣು ಹಾಗೂ ದಂತ ಆಸ್ಪತ್ರೆಯ ಆವರಣದಲ್ಲಿ ಎರ್ಪಡಿಸಿದ್ದ ಉಚಿತ ಕಿವಿ ಪರೀಕ್ಷೆ, ಅವಶ್ಯವಿದ್ದವರಿಗೆ ಆಡಿಯೋಗ್ರಾಮ ಪರೀಕ್ಷಾ ಶಿಬಿರದಲ್ಲಿ ಮಾತನಾಡಿದರು.
ಕಿವುಡ ಮತ್ತು ಮೂಗರು ಸಜ್ಞೆಗಳ ಮೂಲಕ ದೈನಂದಿನ ಕೆಲಸ ಕಾರ್ಯಗಳಿಂದ ಜೀವನ ಸಾಗಿಸುತ್ತಿರುವದನ್ನು ನಾವಿಂದು ಕಾಣಬಹುದು ಇಂತಹ ವ್ಯಕ್ತಿಗಳಿಗೆ ಆಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಕಿವಿ ಕೇಳಿಸುವಂತೆ, ಮಾತು ಬರುವಂತೆ ಮಾಡಲು ಸಾಧ್ಯವೇ ಎಂಬುದನ್ನು ಪರೀಕ್ಷೆಗೆ ಒಳಪಡಿಸಿದಾಗ ಸ್ಪಷ್ಠತೆ ತಿಳಿಯುವದು ಎಂದರು.
ಹಿರಿಯ ತಜ್ಞ ವೈದ್ಯರಾದ ಡಾ.ರಾಜಶೇಖರ ಬಳ್ಳಾರಿ ಅವರು ಮಾತನಾಡಿ ಮಕ್ಕಳಿಗೆ ಅದರಲ್ಲೂ ಸಣ್ಣ ಮಕ್ಕಳಿಗೆ ನೆಗಡಿ ಕೆಮ್ಮು ಆದಾಗ, ಕಿವಿ ಸೋರುವಿಕೆ ಆದಾಗ ಅಲಕ್ಷೀಸದೇ ತಕ್ಷಣ ಸಮೀಪದ ತಜ್ಞ ವೈದ್ಯರ ಬಳಿ ತಪಾಸಣೆ ಮಾಡಿಸಿ ಅವರ ಸಲಹೆ ಔಷಧ ಉಪಚಾರ, ಅಗತ್ಯ ಪರೀಕ್ಷೆಗಳನ್ನು ಮಾಡಿಸುವದು ಅವಶ್ಯವಿದೆ ಎಂದರು.
ಇತ್ತಿಚೆಗೆ ಕಂಪ್ಯೂಟರ್ ಹಾಗೂ ಮೊಬೈಲ್ ಫೋನ್ ಬಳಕೆ ಮಾಡಿಕೊಂಡು ಹೆಡ್ ಫೋನ್, ಬ್ಲ್ಯೂಟೂತ್, ಸ್ಟೀರಿಯೋ ಹೆಡ್ ಫೋನ್‍ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಕಿವುಡುತನ ಸಂಬಂಧಿ ಸಮಸ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿವೆ. ಕಿವಿಯಲ್ಲಿ ಕಡ್ಡಿ, ಪೆನ್ನು, ಚಾವಿ ಹಾಕುವದು ಹಾಗೂ ರಸ್ತೆಯಲ್ಲಿ, ಬಸ್‍ನಿಲ್ದಾಣದಲ್ಲಿ ಕಿವಿ ಸ್ವಚ್ಚಗೊಳಿಸುವ ವ್ಯಕ್ತಿಯಿಂದ ಕಿವಿಯ ಪಟಲು ಹರಿದು ಕಿವಿ ಕೇಳಿಸದಿರಬಹುದು ಎಚ್ಚರಿಕೆ ಮತ್ತು ಜಾಗ್ರತಿ ಅವಶ್ಯ ಎಂದರು.
ಶಿಬಿರದಲ್ಲಿ ಸುಮಾರು 50 ಹೆಚ್ಚು ಜನರು ತಪಾಸಣೆಗೆ ಒಳಗಾದರೂ ಅವಶ್ಯವಿದ್ದವರಿಗೆ ಆಡಿಯೋಗ್ರಾಮ ಪರೀಕ್ಷಾ, ಉಚಿತ ಔಷಧ ನೀಡಿ ವೈದ್ಯರು ಸಲಹೆ ನೀಡಿದರು. ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗದವರು ಶಿಬಿರದ ಯಶಸ್ವಿಗೆ ಕೈ ಜೋಡಿಸಿದರು.