
ಕಲಬುರಗಿ,ಮೇ.16: ನಗರದ ಶಹಾಬಾದ್ ರಸ್ತೆಯಲ್ಲಿರುವ ಪ್ರಶಾಂತನಗರ (ಬಿ)ಯಲ್ಲಿನ ಬಡೇಪೂರ್ ಸಿಎ 1ರ ರಾಜಾಪುರದಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳ ಮತ್ತು ತಾಯಂದಿರ ತರಬೇತಿ ಕೇಂದ್ರವನ್ನು ಆರಂಭಿಸಲಾಗಿದ್ದು, ಕೇಂದ್ರದಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ದಕ್ಷಿಣ ಭಾರತ ದಲಿತ ಎಜುಕೇಷನ್ ಸೊಸೈಟಿ ಅಧ್ಯಕ್ಷೆ ಹಾಗೂ ಮಾಜಿ ಮೇಯರ್ ಶ್ರೀಮತಿ ಚಂದ್ರಿಕಾ ಪರಮೇಶ್ವರ್ ಖಾನಾಪೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಶ್ರವಣ ದೋಷವನ್ನು ಆದಷ್ಟು ಬೇಗ ಗುರುತಿಸುವುದು ಮುಖ್ಯವಾಗಿದೆ. ಗುರುತಿಸಿದ ನಂತರ ಬೇಕಾಗಿರುವ ನಿರ್ವಹಣೆ ಕ್ರಮಗಳನ್ನು ಕೈಗೊಳ್ಳಲು ಸುಲಭವಾಗುತ್ತದೆ. ಶ್ರವಣದೋಷವುಳ್ಳ ಮಗುವಿಗೆ ವಿವಿಧ ರೀತಿಯ ನಿರ್ವಹಣೆ ಕ್ರಮಗಳನ್ನು ಕೈಗೊಂಡು ಆದಷ್ಟು ಬೇಗ ಸ್ಪೀಚ್ ಥೆರೆಫಿ ನೀಡುವುದರಿಂದ ಮಗುವಿಗೆ ಮಾತು ಮತ್ತು ಭಾಷಾ ಬೆಳವಣಿಗೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದರು.
0ದಿಂದ 4 ವರ್ಷದೊಳಗಿನ ಶ್ರಣವದೋಷವುಳ್ಳ ಮಕ್ಕಳು ಮತ್ತು ತಾಯಂದಿರಿಗೆ ಉಚಿತವಾಗಿ ನುರಿತ ತಜ್ಞರಿಂದ ಸ್ವಫಿಚ್ ಥೆರೆಫಿ ನೀಡಲಾಗುವುದು. ತರಬೇತಿಗೆ ಬರುವ ತಾಯಂದಿರಿಗೆ ಮಾಸಿಕ ಭತ್ಯೆ ಹಾಗೂ ಸಾರಿಗೆ ವೆಚ್ಚವನ್ನು ನೀಡಲಾಗುತ್ತದೆ. ಸೌಲಭ್ಯವು ಕೇವಲ ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಮಾತ್ರ. ತರಬೇತಿಯನ್ನು ಬೆಳಿಗ್ಗೆ 10-30ರಿಂದ ಮಧ್ಯಾಹ್ನ 3-30ರವರೆಗೆ ಇದೆ. ವಾರಕ್ಕೊಮ್ಮೆ ಮಕ್ಕಳ ಆರೋಗ್ಯ ಮತ್ತು ಕಿವಿ ತಪಾಸಣೆ ಮಾಡಲಾಗುವುದು. ಮಕ್ಕಳ ಮತ್ತು ಪೋಷಕರ ಆಪ್ತಸಮಾಲೋಚನೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯಸಭೆಯ ಮಾಜಿ ಸದಸ್ಯ ದ. ಗುಂಡಪ್ಪ ಕೋರವಾರ್ ಅವರು ಕಲ್ಯಾಣ ಕರ್ನಾಟಕ ಭಾಗದ ಶ್ರವಣದೋಷವುಳ್ಳ (ಕಿವುಡ ಮತ್ತು ಮೂಕ) ಬಾಲ, ಬಾಲಕಿಯರ ವಿದ್ಯಾಭ್ಯಾಸ ಕೊರತೆ ನೀಗಿಸಲು ಕಳೆದ 1993-1994ರಲ್ಲಿ ಸಿದ್ದಾರ್ಥ ಶ್ರವಣದೋಷವುಳ್ಳ ಮಕ್ಕಳ ವಸತಿಯುತ ಪ್ರೌಢಶಾಲೆಯನ್ನು ಆರಂಭಿಸಿದರು. ಅವರು ಅಸ್ತಂಗತದ ನಂತರ ಅವರ ಕುಟುಂಬದ ಸದಸ್ಯರ ಸಹಯೋಗದೊಂದಿಗೆ ಶಾಲೆಯು ಸುಸಜ್ಜಿತ ವ್ಯವಸ್ಥೆಯೊಂದಿಗೆ ಮುಂದುವರೆದಿದ್ದು, ಸಂಸ್ಥೆಯು ಸ್ವಂತ ಕಟ್ಟಡವನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಸಂಸ್ಥೆಯು ಶ್ರವಣದೋಷವುಳ್ಳ ಮಕ್ಕಳಿಗಾಗಿ ವಿದ್ಯಾದಾನ, ಆರೋಗ್ಯದಾನ ಹಾಗೂ ಉದ್ಯೋಗ ದಾನದ ವ್ಯವಸ್ಥೆಗಾಗಿ ಸೇವೆ ಸಲ್ಲಿಸುತ್ತಿದೆ. ಕಳೆದ 2022-2023ನೇ ಸಾಲಿನಲ್ಲಿ ಹುಟ್ಟಿನಿಂದ ನಾಲ್ಕು ವರ್ಷದ ಶ್ರವಣದೋಷವುಳ್ಳ ಮಕ್ಕಳ ಹಾಗೂ ಅವರ ತಾಯಿಂದಿರಯರಿಗೆ ಮಾತು ಬರುವಿಕೆಗಾಗಿ ಅರಿವು ಮೂಡಿಸುವ ವಿಷಯದ ಮೇಲೆ ಸರ್ಕಾರವು ಕಲ್ಯಾಣ ಕರ್ನಾಟಕದ ಸಾರ್ವಜನಿಕರಿಗಾಗಿ ವಾಕ್ ಕೇಂದ್ರ ಸ್ಥಾಪನೆಗಾಗಿ ಅನುಮತಿ ನೀಡಿದ್ದು, ಅದರ ಲಾಭ ಪಡೆಯಬೇಕು ಎಂದು ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರಾಜೇ ಶಿವಶರಣಪ್ಪ, ಸಹ ಕಾರ್ಯದರ್ಶಿ ಪ್ರಕಾಶ್ ಜಿ. ಕೋರವಾರ್, ಖಜಾಂಚಿ ಪರಮೇಶ್ವರ್ ಖಾನಾಪೂರ್, ಡಾ. ಸಿದ್ದಾರ್ಥ ಜಿ. ಕೋರವಾರ್ ಮುಂತಾದವರು ಉಪಸ್ಥಿತರಿದ್ದರು.