ಕಲಬುರಗಿ :ಜೂ.4: ರೈತ ದೇಶದ ಆಧಾರ ಸ್ಥಂಭ. ಕೃಷಿ ಕಾರ್ಯದ ಪ್ರಮುಖವಾದ, ರೈತನ ಎರಡು ಕಣ್ಣುಗಳಂತಿರುವ, ಆತ ಬೆಳೆಯುವ ಪ್ರತಿ ಕಾಳಿನಲ್ಲಿ ತನ್ನದೆ ಆದ ಅದ್ವೀತಿಯ ಶ್ರಮವನ್ನು ಹೊಂದಿರುವ ಎತ್ತುಗಳನ್ನು ಪೂಜಿಸಿ, ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸುವ, ಎತ್ತುಗಳ ಶ್ರಮವನ್ನು ಗೌರವಿಸುವ ಪ್ರತೀಕದ ರೈತನ ಪ್ರಮುಖ ಹಬ್ಬವೇ ಕಾರ ಹುಣ್ಣಿಮೆಯಾಗಿದೆ ಎಂದು ಗುವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಅಭಿಪ್ರಾಯಪಟ್ಟರು.
ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಪ್ರಗತಿಪರ ರೈತ ಕಾಶಿನಾಥ ಚೇಂಗಟಿ ತೋಟದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ಕಾರ ಹುಣ್ಣಿಮೆ ಉತ್ಸವ, ಪ್ರಗತಿಪರ ರೈತರಿಗೆ ಸತ್ಕಾರ ಹಾಗೂ ಜಾನಪದ ಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ರೈತ ಕಾಶಿನಾಥ ಚೇಂಗಟಿ, ಭಕ್ತಯಿಂದ ಕೆಲಸ ಮಾಡುವವರಿಗೆ ಭೂತಾಯಿ ಎಂದಿಗೂ ಕೂಡಾ ನಷ್ಟ ಉಂಟು ಮಾಡುವುದಿಲ್ಲ. ಕೃಷಿಯ ಬಗ್ಗೆ ಅಸಡ್ಡೆ ಬೇಡ. ಎತ್ತುಗಳ ಶ್ರಮವನ್ನು ಮರೆಯಬಾರದು. ಯಾಂತೀಕರಣದ ಇಂದಿನ ಯುಗದಲ್ಲಿ ಅವುಗಳ ಕಡೆಗಣನೆ ಬೇಡ. ಎಲ್ಲರಿಗೆ ಅನ್ನವನ್ನು ನೀಡುವ ಕೃಷಿ ಪರಂಪರೆ ದೊಡ್ಡದು. ರೈತ ತನ್ನ ಎತ್ತುಗಳನ್ನು ದೇವರ ರೂಪದಲ್ಲಿ ಕಂಡು ಧನ್ಯತೆಯನ್ನು ಸಮರ್ಪಿಸುವ ಸಂಪ್ರದಾಯ ಇದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ ಬಾಳ್ಳಿ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಪ್ರಮುಖರಾದ ಶಾಂತಪ್ಪ ಚೇಂಗಟಿ, ಸುಷ್ಮಾ ಕೆ.ಚೇಂಗಟಿ, ಅಣ್ಣಾರಾಯ ದಣ್ಣೂರ್, ಸುವರ್ಣ, ಶಾಂತಾಬಾಯಿ, ಶರಣಮ್ಮ, ಶಿವಕುಮಾರ, ಶಿವಪುತ್ರ, ಶಿವಲೀಲಾ, ಸುಧಾ, ಶಿವಶಂಕರ, ಸುಜ್ಞಾನಿ, ಪ್ರಭಾಕರ ಸೇರಿದಂತೆ ಮತ್ತಿತರರಿದ್ದರು.