ಶ್ರಮಿಕ ವರ್ಗಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿದ ಪಕ್ಷ ಕಾಂಗ್ರೆಸ್

ತುಮಕೂರು, ಮಾ. ೪- ಶ್ರಮಿಕ ವರ್ಗಕ್ಕೆ ಸೇರಿದ ಬೆಸ್ತರ(ಮೀನುಗಾರರ) ಸಮುದಾಯವನ್ನು ಗುರುತಿಸಿ, ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿರುವ ಪಕ್ಷವೆಂದರೆ ಆದು ಕಾಂಗ್ರೆಸ್ ಮಾತ್ರ ಎಂದು ಕೆಪಿಸಿಸಿ ಮೀನುಗಾರರ ಘಟಕದ ರಾಜ್ಯಾಧ್ಯಕ್ಷ ಮಂಜುನಾಥ್ ಬಿ.ಸುಣಗಾರ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಡಿಸಿಸಿ ಮೀನುಗಾರರ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಪ್ರತಿ ಬಾರಿಯ ಚುನಾವಣೆಯಲ್ಲಿಯೂ ಮೀನುಗಾರರು, ಮೊಗವೀರರು, ಬೆಸ್ತರು ಹೀಗೆ ಸುಮಾರು ೩೯ ವಿವಿಧ ಹೆಸರಿನಲ್ಲಿ ಗುರುತಿಸಿಕೊಂಡಿರುವ ಸಮುದಾಯಗಳಿಗೆ ೫-೮ ಸೀಟುಗಳನ್ನು ನೀಡಿ, ನಮ್ಮಗಳ ರಾಜಕೀಯ ಅವಕಾಶ ಕಲ್ಪಿಸಿದೆ. ಆದರೆ ಬಿಜೆಪಿ ಅತಿ ಹೆಚ್ಚು ಜನಸಂಖ್ಯೆ ಇರುವ ಗುರುಮಿಠಕಲ್ ಮತ್ತು ಕಾಪು ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಅವಕಾಶ ನೀಡುತ್ತಿದೆ. ಜೆಡಿಎಸ್‌ನಿಂದ ಇದುವರೆಗೂ ನಮ್ಮ ಸಮುದಾಯ ಒಬ್ಬರಿಗೂ ಟಿಕೆಟ್ ನೀಡಿಲ್ಲ. ಹಾಗಾಗಿ ಮೊಗವೀರ ಸಮುದಾಯ ಈ ಬಾರಿ ಕಾಂಗ್ರೆಸ್ ಪಕ್ಷದ ಕೈ ಬಲಪಡಿಸುವ ಕೆಲಸ ಮಾಡಬೇಕು ಎಂದರು.
ರಾಜ್ಯದಲ್ಲಿ ಸುಮಾರು ೮೫ ಲಕ್ಷ ಜನಸಂಖ್ಯೆ ಹೊಂದಿರುವ ಮೋಗವೀರ ಸಮುದಾಯವನ್ನು ಗುರುತಿಸಿ ಮೊದಲ ಬಾರಿ ಪ್ರತ್ಯೇಕ ಘಟಕ ತೆರೆಯಲು ಅವಕಾಶ ಮಾಡಿದ್ದು, ರಾಹುಲ್‌ಗಾಂಧಿ ಅವರು, ಅಲ್ಲದೆ ಅವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ನಮ್ಮ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಇದರ ಭಾಗವಾಗಿಯೇ ಕೆಪಿಸಿಸಿ ಮೀನುಗಾರರ ಘಟಕ ೨೦೧೭ರಲ್ಲಿ ಆರಂಭವಾಗಿದೆ. ನನಗೆ ಇದರ ಅಧ್ಯಕ್ಷ ಪದವಿ ನೀಡಿದ್ದು, ರಾಜ್ಯಾದ್ಯಂತ ಪ್ರವಾಸ ಮಾಡಿ, ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರಿಗೆ, ಅದರಲ್ಲಿಯೂ ಮೀನುಗಾರರ ಸಮುದಾಯಕ್ಕೆ ತಿಳಿಸಿ,ಕಾಂಗ್ರೆಸ್ ಬೆಂಬಲಿಸುವಂತೆ ಮುಖಂಡರನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಬೆಸ್ತರ ಪ್ರಮುಖ ಕಸುಬು ಮೀನು ಹಿಡಿಯುವುದು. ಬಲೆ ನೇಯ್ಗೆ, ಸುಣ್ಣ ಸುಡುವುದು, ದೋಣಿಗಳ ತಯಾರಿಕೆ, ದೋಣಿಗಳ ಮೂಲಕ ಜನರ ಸಾಗಾಣಿಕೆ. ಆದರೆ ಅಧುನಿಕತೆಯ ಹೊಡೆತಕ್ಕೆ ಸಿಲುಕಿ ನಮ್ಮ ಎಲ್ಲ ಕುಲಕಸುಬುಗಳು ಅಸ್ಥಿತ್ವ ಕಳೆದು ಕೊಳ್ಳುತ್ತಿವೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ನಮ್ಮ ಜನಾಂಗ ಹಿಂದುಳಿದಿದೆ. ಇಂತಹ ಸಮುದಾಯದ ಅಭಿವೃದ್ದಿಗೆ ಸಿದ್ದರಾಮಯ್ಯ ಅವರು ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ ಸ್ಥಾಪಿಸಿದ್ದಲ್ಲದೆ, ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಶಿಫಾರಸ್ಸನ್ನು ಕೇಂದ್ರಕ್ಕೆ ಕಳುಹಿಸಿದ್ದರು. ಆದರೆ ಇಂದಿಗೂ ಅದು ಕೇಂದ್ರದಲ್ಲಿಯೇ ಕೊಳೆಯುತ್ತಾ ಬಿದ್ದಿದೆ. ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ವರದಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಮೀನುಗಾರರು ನಮ್ಮ ಬಗ್ಗೆ ಕಾಳಜಿ ಇರುವ ಪಕ್ಷಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ ಎಂದು ಹೇಳಿದರು.
ಕೆಪಿಸಿಸಿ ಮೀನುಗಾರರ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಂದ್ರನಾಥ್ ಮಾತನಾಡಿ, ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್, ಎಲ್ಲ ಸಮುದಾಯಗಳನ್ನು ಜಾತಿ, ಧರ್ಮದ ಬೇಧವಿಲ್ಲದೆ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಇಡೀ ದೇಶದಲ್ಲಿಯೇ ಪ್ರಥಮ ಬಾರಿ ಮೀನುಗಾರರ ಘಟಕವನ್ನು ತೆರೆದು ರಾಜಕೀಯವಾಗಿ ಗುರುತಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ಕೊರೊನಾ ಕಾಲದಲ್ಲಿ ಸಂಕಷ್ಟದಲ್ಲಿದ್ದ ಮೀನುಗಾರರ ಕೈ ಹಿಡಿಯದ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ನಾವೆಲ್ಲರು ಮುಂದಾಗಬೇಕೆಂದರು.
ಬೆಸ್ತ ಸಮುದಾಯದ ಮುಖಂಡ ಪಾವಗಡದ ಗೋಪಾಲ್ ಮಾತನಾಡಿ, ಗಂಗಾಮತಸ್ಥರು ಮೂರು ಲೋಕಸಭಾ ಕ್ಷೇತ್ರಗಳಲ್ಲಿ, ೨೫ ಎಂ.ಎಲ್.ಎ ಕ್ಷೇತ್ರಗಳಲ್ಲಿ ನಿರ್ಣಾಯ ಮತದಾರರಾಗಿದ್ದು, ಕೆಲವರ ಸ್ವಾರ್ಥದಿಂದ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದುವರೆಗೂ ನಮ್ಮ ಸಮುದಾಯವನ್ನು ಕೈ ಹಿಡಿದು ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನಾವೆಲ್ಲರೂ ಋಣಿಯಾಗಿರಬೇಕು. ಬಿಜೆಪಿ ಪಕ್ಷದ ಬಿ.ಎಸ್.ವೈ ಮತ್ತು ಬಸವರಾಜ ಬೊಮ್ಮಾಯಿ ಮೀನುಗಾರರನ್ನು ನಂಬಿಸಿ ಮೋಸ ಮಾಡಿದ್ದಾರೆ ಎಂದು ದೂರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಬೆಸ್ತ ಸಮುದಾಯ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯುಳ್ಳ ಸಮುದಾಯವಾಗಿದೆ. ಮಹಾಭಾರತದ ಪಿತಾಮಹ ಭೀಷ್ಮ ಈ ಸಮುದಾಯಕ್ಕೆ ಸೇರಿದವರು. ಕಾಂಗ್ರೆಸ್ ಪಕ್ಷ ಜಾತಿ, ಧರ್ಮ ಮೀರಿದ ಪಕ್ಷ. ಅತಿ ಸಣ್ಣ ಸಮುದಾಯಗಳನ್ನು ಗುರುತಿಸಿ ಮುಖ್ಯಮಂತ್ರಿ ಮಾಡಿದ್ದಾರೆ. ದೇವರಾಜ ಅರಸು, ಬಂಗಾರಪ್ಪ, ಧರ್ಮಸಿಂಗ್, ವೀರಪ್ಪಮೊಹಿಲಿ, ಸಿದ್ದರಾಮಯ್ಯ ಸೇರಿದಂತೆ ಹಲವರನ್ನು ಉದಾಹರಿಸಬಹುದಾಗಿದೆ. ಬಿಜೆಪಿ ಕಾಡುಗೊಲ್ಲರು ಮತ್ತು ಬೆಸ್ತ ಸಮುದಾಯವನ್ನು ಎಂದಿಗೂ ಪರಿಶಿಷ್ಟ ಪಂಗಡಕ್ಕೆ ಸೇರಿಸಲ್ಲ. ರಾಜ್ಯದವರು ಸೇರಿಸುತ್ತೇವೆ ಎಂದು ಭರವಸೆ ನೀಡಿದರೆ, ಕೇಂದ್ರದವರು ಸಾಧ್ಯವಿಲ್ಲ ಎನ್ನುತಿದ್ದಾರೆ. ಸೋಷಿಯಲ್ ಜಸ್ಟೀಸ್ ಎಂಬುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಜೀವಂತವಾಗಿದೆ. ಹಾಗಾಗಿ ಶೋಷಿತರು, ಶ್ರಮಿಕರು ಎಲ್ಲರೂ ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ತಾವು ಸಹ ರಾಜಕೀಯವಾಗಿ ಬೆಳೆಯುಬದು ಎಂದರು. ಜವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಘಟಕದ ಅಧ್ಯಕ್ಷ ಗೋವಿಂದರಾಜು, ಡಿ.ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.