ಶ್ರಮಿಕರಿಗೆ ಸರಕಾರದ ಸೌಲಭ್ಯ ದೊರೆತಾಗ ಮಾತ್ರ ಸಮಾಜದ ಸುಧಾರಣೆ ಸಾಧ್ಯ: ಪ್ರಿಯಾಂಕ

ಅಫಜಲಪುರ:ನ.18: ದೇಶದಲ್ಲಿ ತುಳಿತಕ್ಕೊಳಗಾದ ಕಟ್ಟಕಡೆಯ ಶ್ರಮಿಕರಿಗೆ ಸರಕಾರದ ಸೌಲಭ್ಯ ದೊರೆತಾಗ ಮಾತ್ರ ಸಮಾಜ ಸುಧಾರಣೆಯಾಗಲಿದೆ ಎಂದು ಚಿತ್ತಾಪೂರ ಶಾಸಕ ಪ್ರಿಯಾಂಕ ಖರ್ಗೆ ಹೇಳಿದರು.

ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ನವ ತರುಣ ಸಂಘದಿಂದ ಡಾ. ಅಂಬೇಡ್ಕರ ಅವರ ನೂತನ ಪಂಚಲೋಹದ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ರೈತರ ಮತ್ತು ಶ್ರಮಿಕ ವರ್ಗದ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡು ನೆರವಾಗಿದೆ. ಆದರೆ ಬಿಜೆಪಿ ನೇತೃತ್ವದ ಸರಕಾರ ಏನು ಮಾಡಿದೆ ಎಂದು ಪ್ರಶ್ನಿಸಿದ ಅವರು, ಕೇವಲ ಹಸಿರು ಶಾಲು ಹಾಕಿಕೊಂಡ ಮಾತ್ರಕ್ಕೆ ರೈತರ ಪರ ಕಾಳಜಿ ಇದೆ ಎಂದು ಅರ್ಥವಲ್ಲ. ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ಅನ್ಯಾಯ ಮಾಡಿದರು ಎಂದು ದೂರಿದರು.

ಮಹಾತ್ಮರು ಒಂದೇ ಜಾತಿಗೆ ಸೀಮಿತವಾಗಿ ಕೆಲಸ ಮಾಡಿಲ್ಲ. ಪ್ರತಿಯೊಂದು ಸಮಾಜದ, ಜಾತಿಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಭಾರತ ಸುಭೀಕ್ಷವಾಗುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ವೈ.ಪಾಟೀಲ ಮಾತನಾಡಿ, ಜಗತ್ತಿನಲ್ಲಿ ಅತಿ ಹೆಚ್ಚು ಡಾ. ಅಂಬೇಡ್ಕರ್ ಅವರ ಪ್ರತಿಮೆಗಳಿವೆ. ಈ ದೇಶ ಧರ್ಮಗುರುಗಳು ಆಳಬಾರದು. ಸಂವಿಧಾನದ ಕಲಂಗಳ ಆಧಾರದ ಮೇಲೆ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಜ್ಞಾನ ಪ್ರಕಾಶ ಮಹಾಸ್ವಾಮಿಗಳು ಮಾತನಾಡಿ, ಜಗತ್ತಿನ ಎಲ್ಲೆಡೆ ಪ್ರತಿನಿತ್ಯ ಡಾ. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಅನಾವರಣಗೊಳಿಸಲಾಗುತ್ತಿದೆ. ಇಂದಿನ ಯುವಕರು ಡಾ. ಅಂಬೇಡ್ಕರ್ ಅವರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕೆಂದು ಕರೆ ನೀಡಿದರು.

ಮಾಜಿ ಎಂ.ಎಲ್.ಸಿ ಅಲ್ಲಮಪ್ರಭು ಪಾಟೀಲ, ಸ್ವಾಗತ ಸಮಿತಿಯ ಅಧ್ಯಕ್ಷ ಶರಣಗೌಡ ಪಾಟೀಲ, ಜಿ.ಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ, ರಾಜೇಂದ್ರ ಪಾಟೀಲ ರೇವೂರ, ಮಾಜಿ ಎಂ.ಎಲ್.ಸಿ ತಿಪ್ಪಣ್ಣ ಕಮಕನೂರ, ತಾ.ಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ಮಹಾಂತೇಶ ಪಾಟೀಲ ಸೊನ್ನ, ಮಕ್ಬೂಲ್ ಪಟೇಲ್, ಜೆ.ಎಂ ಕೊರಬು, ಶಿವಕುಮಾರ ನಾಟೀಕಾರ, ನಾಗೇಶ ಕೊಳ್ಳಿ, ಪ್ರಕಾಶ ಜಮಾದಾರ, ಮಲ್ಲಿಕಾರ್ಜುನ ಸಿಂಗೆ, ದಯಾನಂದ ದೊಡ್ಡಮನಿ, ಸಿದ್ದಾರ್ಥ ಬಸರಿಗಿಡ, ದಿಲೀಪ ಪಾಟೀಲ, ಹುಸೇನಿ ಜಮಾದಾರ, ಅಶೋಕ ಗುತ್ತೇದಾರ, ಸುರೇಶ ಚಕ್ರವರ್ತಿ, ಸೂರ್ಯಕಾಂತ ಅಣಿವರ, ಸಂಜೀವಕುಮಾರ ಸಾಗರ, ವಿಶ್ವನಾಥ ಕಾರ್ನಾಡ, ನಿಜಗುಣ ಚಕ್ರವರ್ತಿ, ವಿಜಯಕುಮಾರ ಸಾಲಿಮನಿ, ಬಸಣ್ಣ ಚಕ್ರವರ್ತಿ, ದತ್ತಪ್ಪ ಸಾಗರ, ಮಹಾಲಿಂಗ ಅಂಗಡಿ, ನಾಗರಾಜ ಬಿರಾದಾರ, ಶರಣಬಸಪ್ಪ ಮೂಲಭಾರತಿ ಸೇರಿದಂತೆ ಇತರರಿದ್ದರು.

7 ಕೋಟಿ ರೂ ಕಾಮಗಾರಿಗಳಿಗೆ ಚಾಲನೆ.
ಅಫಜಲಪುರ: ತಾಲೂಕಿನ ನಾನಾ ಕಡೆ ಒಟ್ಟು 7 ಕೋಟಿ ರೂಗಳ ಕಾಮಗಾರಿಗೆ ಶಾಸಕರಾದ ಪ್ರಿಯಾಂಕ ಖರ್ಗೆ, ಎಂ.ವೈ.ಪಾಟೀಲ ಚಾಲನೆ ನೀಡಿ ಕೆಲವು ಕಾಮಗಾರಿ ಉದ್ಘಾಟನೆ ನೆರವೇರಿಸಿದರು. ಫರತ್ಹಾಬಾದನಲ್ಲಿ ಅಂಬೇಡ್ಕರ್ ಭವನಕ್ಕೆ 50 ಲಕ್ಷ, ಸಿ.ಸಿ ರಸ್ತೆಗೆ 50 ಲಕ್ಷ, ರೈತ ಸಂಪರ್ಕ ಕೇಂದ್ರ ಉದ್ಘಾಟನೆ 36 ಲಕ್ಷ, ಗೊಬ್ಬೂರ (ಬಿ) ಪಶು ಚಿಕಿತ್ಸಾಲಯ ಕಟ್ಟಡ 36 ಲಕ್ಷ, ಅತನೂರನಲ್ಲಿ ಸಿ.ಸಿ ರಸ್ತೆಗೆ 50 ಲಕ್ಷ, ಅಫಜಲಪುರ ಪಟ್ಟಣದಲ್ಲಿ ಪೂರ್ಣಗೊಂಡ ಸರಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯ ಕಟ್ಟಡ 4.61 ಕೋಟಿ ರೂ, ಭೈರಾಮಡಗಿಯಲ್ಲಿ ವಿವಿಧ ಕಾಲೋನಿಗಳಲ್ಲಿ ಸಿ.ಸಿ ರಸ್ತೆ ನಿರ್ಮಾಣಕ್ಕಾಗಿ 20 ಲಕ್ಷ ಕಾಮಗಾರಿಗಳಿಗೆ ಚಾಲನೆ ನೀಡಿದರು.