ಶ್ರಮಿಕರಿಗೆ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು, ಮೇ.26:- ರಾಜ್ಯ ಸರ್ಕಾರ ಶ್ರಮಿಕ ವರ್ಗದವರಿಗೆ 10ಸಾವಿರ ರೂ.ಪ್ಯಾಕೇಜ್ ಘೋಷಣೆ ಮಾಡುವಂತೆ ಒತ್ತಾಯಿಸಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ವತಿಯಿಂದ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಯಿತು.
ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷದಿಂದ ಸುಮಾರು 17ತಿಂಗಳಿನಿಂದ ಮಹಾಮಾರಿ ಕೋವಿಡ್ 19ಕಾಯಿಲೆ ಬಂದು ರಾಜ್ಯದ ಜನತೆ ತುಂಬ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಅದರಲ್ಲೂ ಶ್ರಮಿಕ ವರ್ಗ ಅಂದರೆ ಕಟ್ಟಡ ಕಾರ್ಮಿಕರು ಅಸಂಘಟಿತ ಕಾರ್ಮಿಕರಿಗೆ ಜೀವನ ನಡೆಸಲು ಆಗದ ಸ್ಥಿತಿಯಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ 2000 ಮತ್ತು 3000 ಪ್ಯಾಕೇಜ್ ಘೋಷಣೆ ಮಾಡಿದೆ. ಇವತ್ತಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಇದು ಯಾವುದೂ ಸಾಕಾಗುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರ ತಕ್ಷಣ ಹತ್ತು ಸಾವಿರ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಶ್ರಮಿಕ ವರ್ಗ ಕೋವಿಡ್-19ಗೆ ತುತ್ತಾಗಿ ಮರಣಹೊಂದಿದ ಕುಟುಂಬಕ್ಕೆ 10ಲಕ್ಷರೂ.ಪರಿಹಾರ ನೀಡಬೇಕು. ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು. ಜೊತೆಗೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿರುವ 7000ಕೋಟಿ ಹಣವನ್ನು ಕೂಡಲೇ ಈ ಸಂದರ್ಭದಲ್ಲಿ ಬಳಸಿಕೊಂಡು ಶ್ರಮಿಕ ವರ್ಗಕ್ಕೆ ನೆರವಾಗಬೇಕೆಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.