ಶ್ರದ್ಧೆ, ಸಮರ್ಪಣಾಭಾವದಿಂದ ವೃತ್ತಿಯಲ್ಲಿ ಯಶಸ್ಸು-ಸಹ ನಿರ್ದೇಶಕ ರೇವಣಸಿದ್ದಪ್ಪ

ಚಿತ್ರದುರ್ಗ.ಜೂ.೧೬: ಶ್ರದ್ಧೆ, ಪ್ರಾಮಾಣಿಕತೆ, ಸಮರ್ಪಣಾಭಾವದಿಂದ ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ(ಕೆ.ಎಸ್.ಇ.ಎ.ಬಿ)ಸಹ ನಿರ್ದೇಶಕ ಎಂ.ರೇವಣಸಿದ್ದಪ್ಪ ಹೇಳಿದರು. ನಗರದ ಡಯಟ್‌ನಲ್ಲಿ ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಶೈಕ್ಷಣಿಕ ಚಟುವಟಿಕೆಗಳು ಮತ್ತು ಗುಣಾತ್ಮಕ ಶಿಕ್ಷಣ ಕುರಿತು ಮಾತನಾಡಿದ ಅವರು ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಪ್ರೀತಿಸಬೇಕು. ಶ್ರದ್ಧೆ, ಸಮಯಪ್ರಜ್ಞೆ, ಸಮರ್ಪಣಾಭಾವ ನಮ್ಮ ವೃತ್ತಿಯ ಬೆಳವಣಿಗೆಗೆ ಪೂರಕವಾಗುತ್ತದೆ. ಶೈಕ್ಷಣಿಕ ಚಟುವಟಿಕೆಗಳ ಯಶಸ್ಸಿಗೆ ಸಮಷ್ಠಿ, ಸಮನ್ವಯತೆ ಅಗತ್ಯವಾಗಿದೆ ಎಂದು ತಿಳಿಸಿದರು. ಮುಖ್ಯಸ್ಥರು ಮತ್ತು ಸಿಬ್ಬಂದಿವರ್ಗದವರ ನಡುವೆ ಉತ್ತಮ ಬಾಂಧವ್ಯವಿರಬೇಕು. ಇದರಿಂದ ಶೈಕ್ಷಣಿಕ ಚಟುವಟಿಕೆಗಳು ಯಶಸ್ವಿಯಾಗಿ ನಡೆಯಲು ಸಾಧ್ಯವಾಗುತ್ತದೆ. ಅಧಿಕಾರಿಗಳ ಮಾರ್ಗದರ್ಶನ, ಶಿಕ್ಷಕರ ಕ್ರಿಯಾಶೀಲತೆಯಿಂದ ಈ ವರ್ಷ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಉತ್ತಮ ಫಲಿತಾಂಶಕ್ಕೆ ಉಪನಿರ್ದೇಶಕರು(ಆಡಳಿತ) ಮತ್ತು ಉಪನಿರ್ದೇಶಕರು(ಅಭಿವೃದ್ಧಿ) ಯವರ ಮಾರ್ಗದರ್ಶನ ಎಲ್ಲಾ ಶೈಕ್ಷಣಿಕ ಭಾಗೀದಾರರ ಪಾತ್ರ ಮುಖ್ಯವಾಗಿದೆ ಎಂದರು. ಪ್ರಾಚಾರ್ಯ ಎಂ.ನಾಸಿರುದ್ದೀನ್ ಮಾತನಾಡಿ, ಭವಿಷ್ಯದ ಪ್ರಜೆಗಳನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಕಾರ್ಯಕ್ಷಮತೆ ಮುಖ್ಯವಾದುದು. ಆಳವಾದ ಜ್ಞಾನವನ್ನು ಪಡೆದು ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಶ್ರಮಿಸಬೇಕು. ರೇವಣಸಿದ್ದಪ್ಪನವರು ನಮ್ಮ ಜಿಲ್ಲೆಯಲ್ಲಿ ಬಿ.ಇ.ಓ ಮತ್ತು ಉಪನಿರ್ದೇಶಕರಾಗಿ ಉತ್ತಮವಾಗಿ ಕೆಲಸ ನಿರ್ವಹಿಸುವುದರ ಮೂಲಕ ಎಲ್ಲಾ ಶೈಕ್ಷಣಿಕ ಭಾಗೀದಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ತಿಳಿಸಿದರು. ಹಿರಿಯ ಉಪನ್ಯಾಸಕರಾದ ಸಿ.ಎಸ್.ವೆಂಕಟೇಶ್, ಎಸ್.ಸಿ.ಪ್ರಸಾದ್, ಈ ಹಾಲಮೂರ್ತಿ, ಮಹಮದ್ ಅಯೂಬ್ ಸೊರಬ್, ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಎಸ್.ಬಸವರಾಜು, ವಿ.ಕನಕಮ್ಮ, ಕೆ.ಜಿ.ಪ್ರಶಾಂತ್, ಬಿ.ಎಸ್.ನಿತ್ಯಾನಂದ, ಎನ್.ರಾಘವೇಂದ್ರ, ಜಿ.ಎಸ್.ನಾಗರಾಜು, ಸಿ.ಎಸ್.ಲೀಲಾವತಿ, ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್‌ಕುಮಾರ್, ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್, ಆರ್.ಲಿಂಗರಾಜು, ಕಚೇರಿ ಸಿಬ್ಬಂದಿ ವರ್ಗದವರು ಮತ್ತಿತರರಿದ್ದರು.