ಶ್ರದ್ಧೆ, ಸಂಘಟಿತ ಪ್ರಯತ್ನದಿಂದ ಯಶಸ್ಸು

ಚಿತ್ರದುರ್ಗ.ಜ.೧೪: ಶ್ರದ್ಧೆ,ಸಂಘಟಿತ ಪ್ರಯತ್ನದಿಂದ ನಮ್ಮ ಕಾಯಕದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶೋಭಾ ಹೇಳಿದರು. ನಗರದ ಡಯಟ್‌ನಲ್ಲಿ ನೂತನವಾಗಿ ನೇಮಕವಾಗಿರುವ ಪದವಿಪೂರ್ವ ಉಪನ್ಯಾಸಕರಿಗೆ ಆಯೋಜಿಸಿದ್ದ ಬುನಾದಿ ತರಬೇತಿಯಲ್ಲಿ  ಮಾತನಾಡಿ, ಡಯಟ್ ಪ್ರಾಚಾರ್ಯರಾದ ಎಸ್.ಕೆ.ಬಿ.ಪ್ರಸಾದ್ ನೇತೃತ್ವದಲ್ಲಿ ಸಿಬ್ಬಂದಿ ವರ್ಗದವರು ನಮ್ಮ ನಿರೀಕ್ಷೆಗಿಂತ ಹೆಚ್ಚಿನದಾಗಿ ತರಬೇತಿಯನ್ನು ಯಶಸ್ವಿಗೊಳಿಸಿದ್ದಾರೆಂದು ಅಭಿನಂದನೆ ಸಲ್ಲಿಸಿದರು. ನೋಡಲ್ ಅಧಿಕಾರಿ ಬೋರೇಗೌಡ ಮಾತನಾಡಿ, ನಾವು ನಮ್ಮ ವೃತ್ತಿಯಲ್ಲಿ ತೃಪ್ತಿ ಕಾಣಬೇಕು.ಇಲಾಖೆಯ ಆಶಯಗಳನ್ನು ಈಡೇರಿಸುವುದರ ಮೂಲಕ ಶಿಕ್ಷಣ ಇಲಾಖೆಗೆ ಉಪನ್ಯಾಸಕರು ನಿಜವಾದ ಆಸ್ತಿಯಾಗಬೇಕು. ನಿಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದರ ಮೂಲಕ ವೃತ್ತಿ ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದರು. ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ, ನೈತಿಕ ಶಿಕ್ಷಣದಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ. ಪಠ್ಯವಿಷಯದ ಜತೆಗೆ ಸಹಪಠ್ಯ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ರಸಪ್ರಶ್ನೆ, ಜ್ಞಾಪಕಶಕ್ತಿ ಸ್ಪರ್ಧೆ ನಡೆಸುವುದರಿಂದ ಮಕ್ಕಳಲ್ಲಿ ಮಾತುಗಾರಿಕೆ ಕೌಶಲ, ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಶಾಲೆ, ಕಾಲೇಜುಗಳಲ್ಲಿ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರ ಮಧ್ಯೆ ಅನ್ಯೋನ್ಯ ಸಂಬಂಧವಿರಬೇಕು. ಕೌಟುಂಬಿಕ ವಾತಾವರಣ ನಿರ್ಮಾಣ ಮಾಡಿಕೊಂಡಾಗ ಶೈಕ್ಷಣಿಕ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತವೆ  ಎಂದರು.  ಉಪನ್ಯಾಸಕ ಕೆ.ಜಿ.ಪ್ರಶಾಂತ್ ಮಾತನಾಡಿ, ಸುಂದರವಾದ ಕಟ್ಟಡ ನಿರ್ಮಿಸಲು ಬುನಾದಿ ಅವಶ್ಯವಿರುವಂತೆ ಮಕ್ಕಳಲ್ಲಿ ಕಲಿಕೆಯುಂಟು ಮಾಡಿ ಸುಸಂಸ್ಕೃತ ವ್ಯಕ್ತಿಗಳಾಗಿ ಜೀವನ ನಡೆಸಲು ಬುನಾದಿ ತರಬೇತಿ ನೆರವಾಗುತ್ತದೆ. ಬೋಧನೆ-ಕಲಿಕೆ ಪರಿಣಾಮಕಾರಿಯಾಗಲು ಉಪನ್ಯಾಸಕರಿಗೆ ಸಂವಹನ ಕೌಶಲ ಅಗತ್ಯ ಎಂದರು. ಜ್ಞಾಪಕ ಶಕ್ತಿ ಸ್ಪರ್ಧೆಯಲ್ಲಿ ವಿಜೇತರಾದ ಶಿಬಿರಾರ್ಥಿಗಳಾದ ರಾಘವೇಂದ್ರ, ಹೇಮಾವತಿ, ಸುರೇಶ್‌ಬಾಬು ಇವರಿಗೆ ಬಹುಮಾನ ವಿತರಿಸಲಾಯಿತು. ತರಬೇತಿ ವೀಕ್ಷಕರಾದ ಸಜ್ಜನ್, ದೈಹಿಕ ಶಿಕ್ಷಕಿ ಶೋಭಾರಾಣಿ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.