ಶ್ರದ್ಧೆ, ಭಕ್ತಿಯ ರಾಮ ನವಮಿ ಆಚರಣೆ

ಬೀದರ್:ಎ.1: ರಾಮ ನವಮಿಯನ್ನು ಇಲ್ಲಿಯ ಬಿ.ವಿ. ಭೂಮರಡ್ಡಿ ಕಾಲೇಜು ರಸ್ತೆಯಲ್ಲಿ ಇರುವ ರಾಮ ಚೌಕ್‍ನಲ್ಲಿ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.

ರಾಮ ನವಮಿ ಆಚರಣೆ ಸಮಿತಿ ವತಿಯಿಂದ ರಾಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಜೈ ಶ್ರೀರಾಮ ಘೋಷಣೆ ಮೊಳಗಿಸಲಾಯಿತು.

ಧ್ವನಿ ವರ್ಧಕದಲ್ಲಿ ಮೊಳಗಿದ ಭಕ್ತಿ ಗೀತೆಗೆ ಯುವಕರು ಕುಣಿದು ಕುಪ್ಪಳಿಸಿದರು. ಗಣ್ಯರೂ ಹೆಜ್ಜೆ ಹಾಕಿ ಹುರಿದುಂಬಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಮ ನವಮಿ ಆಚರಣೆ ಸಮಿತಿ ಪ್ರಮುಖರೂ ಆದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಮುಂದಿನ ರಾಮ ನವಮಿ ವೇಳೆಗೆ ರಾಮ ಚೌಕ್‍ನಲ್ಲಿ ಕಂಚಿನ ರಾಮ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು. ಉದ್ಯಮಿ ಶಿವಶಂಕರ ಫುಲಸೆ, ಬಿಡಿಎ ಅಧ್ಯಕ್ಷ ಬಾಬುವಾಲಿ ಹಾಗೂ ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ಪ್ರತಿಮೆಗೆ ವೈಯಕ್ತಿಕ ನೆರವು ನೀಡುವ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ರಾಮ ನ್ಯಾಯ, ನೀತಿ, ಧರ್ಮದ ಪ್ರತೀಕ. ಈ ಮೂರು ವಿಷಯಗಳು ಬಂದಾಗಲೆಲ್ಲ ಮೊದಲಿಗೆ ನೆನಪಾಗುವುದೇ ಅವರು. ಆಯೋಧ್ಯೆಯಲ್ಲಿ ಆದರ್ಶ ಆಡಳಿತ ನಡೆಸಿದ್ದರು. ಭಗವಾನ್ ರಾಮರ ಸ್ಮರಣೆಯಿಂದ ಜೀವನ ಮೌಲ್ಯ ಹೆಚ್ಚುತ್ತದೆ ಎಂದು ಹೇಳಿದರು.

ರಾಮರ ಆದರ್ಶ ತತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಿವಶಂಕರ ಫುಲಸೆ, ಬಾಬುವಾಲಿ ಹಾಗೂ ಶಶಿಧರ ಹೊಸಳ್ಳಿ ಅವರು ರಾಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಪ್ರಮುಖರಾದ ಶಾಮರಾವ್ ಹಲಮಡಗೆ, ಶಿವಕುಮಾರ ಭಾಲ್ಕೆ, ಸಚ್ಚಿದಾನಂದ ಚಿದ್ರೆ, ಅರುಣ ಹೋತಪೇಟ್, ದಿಲೀಪ್ ಫೋಟೋ ಸ್ಟುಡಿಯೊ, ಆಕಾಶ ಚಿದ್ರೆ, ಧನರಾಜ ಗುನ್ನಳ್ಳಿ, ವಿವೇಕ ಪಟ್ನೆ, ಕಲ್ಯಾಣರಾವ್ ಬಿರಾದಾರ, ಹಣಮಂತ ಬುಳ್ಳಾ, ಡಾ. ಲೋಕೇಶ ಹಿರೇಮಠ, ಮಾದಯ್ಯ ಸ್ವಾಮಿ, ಮೊದಲಾದವರು ಪಾಲ್ಗೊಂಡಿದ್ದರು.

ವೃತ್ತದ ಪ್ರದೇಶದಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು. ಸಾರ್ವಜನಿಕರಿಗೆ ಅನ್ನ ಪ್ರಸಾದ ವಿತರಿಸಲಾಯಿತು.