
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಅ.೧೪: ಶ್ರದ್ಧೆ, ಪರಿಶ್ರಮ, ನಿರಂತರ ಅಧ್ಯಯನದಿಂದ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ಎನ್.ಎಂ.ಎA.ಎಸ್ ಜಿಲ್ಲಾ ನೋಡಲ್ ಅಧಿಕಾರಿ ಕೆ.ಜಿ.ಪ್ರಶಾಂತ್ ಹೇಳಿದರು. ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಮತ್ತು ಇನ್ನರ್ ವೀಲ್, ಚಿತ್ರದುರ್ಗ ಫೋರ್ಟ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಚಿತ್ರದುರ್ಗ ತಾಲೂಕಿನ ಎನ್.ಎಂ.ಎA.ಎಸ್ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ವಾಸವಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿರುವ ಎನ್.ಎಂ.ಎA.ಎಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಾಗಾರದಲ್ಲಿ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಸಂಪನ್ಮೂಲ ವ್ಯಕ್ತಿಗಳು ಬೋಧಿಸುವ ವಿಷಯವನ್ನು ಅರ್ಥೈಸಿಕೊಂಡು ನಿರಂತರವಾಗಿ ಪುನರ್‌ಮನನ ಮಾಡಿಕೊಳ್ಳಬೇಕು. ಆಗ ಮಾತ್ರ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆದು ಉತ್ತಮ ಫಲಿತಾಂಶ ಪಡೆಯಬಹುದು ಎಂದು ತಿಳಿಸಿದರು. ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ನಿಗದಿ ಪಡಿಸಿರುವ ವಿಷಯವನ್ನು 7 ನೇ ತರಗತಿಯ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯವನ್ನು ಪೂರ್ಣವಾಗಿ ಅಧ್ಯಯನ ಮಾಡಬೇಕು. 8 ನೇ ತರಗತಿಯ 3 ವಿಷಯಗಳಲ್ಲಿ ನವೆಂಬರ್ ತಿಂಗಳವರೆಗಿನ ಪಠ್ಯವಸ್ತುವನ್ನು ಅಧ್ಯಯನ ಮಾಡಬೇಕು. ಕಂಠಪಾಠ ಮಾಡಿ ಕಲಿಯುವ ವಿಷಯ ಹೆಚ್ಚು ದಿನ ನೆನಪಿನಲ್ಲಿ ಉಳಿಯುವುದಿಲ್ಲ. ಕಲಿತ ವಿಷಯ ನೆನಪಿನಲ್ಲಿ ಉಳಿಯಲು ಪಠ್ಯವಸ್ತುವಿನ ಅಭ್ಯಾಸ ಚಟುವಟಿಕೆಗಳನ್ನು ಮಾತ್ರ ಗಮನಿಸದೆ ವಿಷಯದ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಂಡು ಕಲಿಯುವುದರಿಂದ ಪರೀಕ್ಷೆಯಲ್ಲಿ ಯಶಸ್ಸು ಪಡೆಯಬಹುದು ಎಂದು ತಿಳಿಸಿದರು.