ಶ್ರದ್ಧೆಯಿಂದ ಅಭ್ಯಾಸ ಮಾಡಿ ಪಾಲಕರಿಗೆ ಕೀರ್ತಿ ತರಬೇಕು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.01:ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ತಾಂತ್ರಿಕತೆ, ಮತ್ತು ನೈಪುಣ್ಯತೆಗಳನ್ನು ಅಳವಡಿಸಿಕೊಂಡು ಹೆಚ್ಚಿನ ಶ್ರದ್ದೆಯಿಂದ ಅಭ್ಯಾಸ ಮಾಡುವ ಮೂಲಕ ಪಾಲಕರಿಗೆ ಹಾಗೂ ನಾಡಿಗೆ ಕೀರ್ತಿ ತರುವ ಕೆಲಸವನ್ನು ಮಾಡಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು ತಿಳಿಸಿದರು.
ಅವರು ಪುರಸಭಾ ವ್ಯಾಪ್ತಿಯ ಹೊಸಹೊಳಲು ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ 2024-25 ನೇ ಸಾಲಿನ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಗುಲಾಬಿ, ಪಠ್ಯಪುಸ್ತಕ, ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದರು.
ಬೇಸಿಗೆ ರಜೆ ಮುಗಿಸಿ ಶಾಲೆಗೆ ಆಗಮಿಸಿದ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ ಯೋಗಕ್ಷೇಮ ವಿಚಾರಿಸಿದ ಅವರು ಸರ್ಕಾರ ಪ್ರತಿವರ್ಷ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ವಿವಿಧ ರೀತಿಯ ಸೌಕರ್ಯಗಳನ್ನು ಒದಗಿಸುತ್ತಿದೆ. ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಅಪೌಷ್ಟಿಕತೆ ಇರುವುದನ್ನು ಮನಗಂಡು ಬಿಸಿಯೂಟದ ಜೊತೆಗೆ, ಹಾಲು, ರಾಗಿಮಾಲ್ಟ್, ಮೊಟ್ಟೆ ಮುಂತಾದುವುಗಳನ್ನು ಒದಗಿಸುತ್ತಿದೆ. ಉಚಿತ ಶೂ ಮತ್ತು ಸಾಕ್ಸ್, ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ಕ್ವಿಜ್, ರಸಪ್ರಶ್ನೆ, ಸೇರಿದಂತೆ ವಿವಿಧ ಸವಲತ್ತುಗಳನ್ನು ಒದಗಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಕಡೆಗೆ ಆಸಕ್ತಿ ಕಡಿಮೆಯಾಗುತ್ತಿದ್ದು ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಟಿವಿ, ಮೊಬೈಲ್, ಅಂತರ್ಜಾಲ ಮುಂತಾದುವುಗಳು ನಮ್ಮ ಸಹಾಯಕ್ಕೆ ಅಥವಾ ಆಳವಾದ ಜ್ಞಾನವನ್ನು ಹೊಂದಲು ಬಳಸಿಕೊಳ್ಳಬೇಕೇ ವಿನ: ಅವುಗಳನ್ನು ವೀಡಿಯೋ ಗೇಮ್, ಮತ್ತಿತರ ಕೆಟ್ಟ ಹವ್ಯಾಸಗಳಿಗೆ ಬಳಸಿಕೊಳ್ಳಬಾರದು. ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಪರಿಶ್ರಮ ಹಾಗೂ ಸತತ ಅಭ್ಯಾಸ ಮಾಡುವ ಮೂಲಕ ಶ್ರೇಷ್ಟ ಸಾಧನೆ ಮಾಡಬೇಕು. ಕೇವಲ ಅಂಕಗಳಿಕೆ ಮಾತ್ರ ಶಿಕ್ಷಣವಲ್ಲ. ನೀವು ಪಡೆಯುವ ಶಿಕ್ಷಣ ನಿಮ್ಮ ಬದುಕಿನ ಸಂಸ್ಕಾರಕ್ಕೆ ಅನುಕೂಲಕರವಾಗಿರಬೇಕು. ಉನ್ನತ ವ್ಯಾಸಂಗ ಮಾಡುವಾಗ ತಾಂತ್ರಿಕತೆಗೆ ಹೆಚ್ಚು ಗಮನ ನೀಡಬೇಕು. ಇಂದಿನ ಸ್ಪರ್ದಾತ್ಮಕ ಯುಗದಲ್ಲಿ 98% ಗಳಿಸಿದರೂ ತಾಂತ್ರಿಕವಾಗಿ ಪರಿಪೂರ್ಣತೆ ಪಡೆಯದಿದ್ದರೆ ನಿಮಗೆ ಎಲ್ಲಿಯೂ ಕೆಲಸ ಸಿಗುವುದಿಲ್ಲ. ಶಿಕ್ಷಣದ ಎಲ್ಲಾ ಕ್ಷೇತ್ರಗಳಿಗೂ ಅದರದೇ ಆದ ಮಹತ್ವ, ಬೆಲೆ ಇದೆ. ಆದರೆ ವೃತ್ತಿಕೌಶಲ್ಯತೆಯನ್ನು ನಿಮ್ಮ ಮುಂದಿನ ತಲೆಮಾರಿಗೆ ಬಳಸುವ ಕಲೆಯನ್ನು ತಿಳಿದವರಿಗೆ ಕಂಪನಿಗಳು ಉದ್ಯೋಗವನ್ನು ನೀಡುತ್ತವೆ.
ಶಿಕ್ಷಣ ಸಂಸ್ಕಾರವನ್ನು ಕಲಿಸುವುದರ ಜೊತೆಗೆ ಬದುಕಿಗೂ ದಾರಿಯಾಗಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಮಾಡಬೇಕು. ಹಿಂದೆ ಶಿಕ್ಷಣ ಪಡೆಯಲು ಅವಕಾಶಗಳು ಕಡಿಮೆ ಇದ್ದವು ಆದರೆ ಇಂದು ವಿಪುಲ ಅವಕಾಶಗಳಿದ್ದು ಅವುಗಳನ್ನು ಬಳಸಿಕೊಳ್ಳುವವರೇ ಬುದ್ದಿವಂತರು. ಆದ್ದರಿಂದ ನಿಮ್ಮ ವ್ಯಾಸಂಗದ ಅವಧಿ ಪೂರ್ಣಗೊಳ್ಳುವವರೆಗೂ ನಿಮ್ಮ ಮನಸ್ಸನ್ನು ಹರಿಯಬಿಡದೇ ಏಕಾಗ್ರತೆಯ ಕಡೆಗೆ ಕೊಂಡೋಯ್ಯಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 2024-25 ನೇ ಸಾಲಿನಲ್ಲಿ ಇಲಾಖೆಯಿಂದ ಸರಬರಾಜಾಗಿರುವ ಪಠ್ಯಪುಸ್ತಕ ಹಾಗೂ ಎರಡು ಜೊತೆ ಸಮವಸ್ತ್ರಗಳನ್ನು ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಹೊಸಹೊಳಲು ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿ.ರಾಮಲಿಂಗಯ್ಯ, ಸಹಶಿಕ್ಷಕರಾದ ಡಿ.ರಮೇಶ್, ಯಶೋಧಮ್ಮ, ಬಿ.ಕೆ.ರೇಖಾ, ಎಂ.ಈಶ. ಗೌಡ ಉಮಾದೇವಿರಾಮು, ಎಂ.ಬಿ.ಪ್ರಕಾಶ್, ಶಿವಲಿಂಗಪ್ಪ, ಪಿ.ಜೆ.ಕುಮಾರ್, ಭಾಗ್ಯ, ರೇಖಾ, ನಳಿನಾಕ್ಷಿ, ಮಹದೇವ ಸೇರಿದಂತೆ ಹಲವರಿದ್ದರು.