ಶ್ರದ್ಧೆಯಿಂದ ಅಭ್ಯಾಸ ಮಾಡಲು ಕರೆ

ಕೋಲಾರ,ಮಾ,೧೬- ಎಸ್ಸೆಸ್ಸೆಲ್ಸಿ ನಿಮ್ಮ ಜೀವನದ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆಗೆ ಇನ್ನೂ ಕೇವಲ ೧೫ ದಿನಗಳು ಮಾತ್ರವಿದೆ, ಪ್ರತಿಕ್ಷಣವೂ ಉಪಯುಕ್ತವಾಗಿದೆ, ಸಮಯ ವ್ಯರ್ಥ ಮಾಡದೇ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಸಾಧನೆ ಸುಲಭ ಎಂದು ಜಿಲ್ಲಾ ಶಿಕ್ಷಣ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ಹಿರಿಯ ಉಪನ್ಯಾಸಕ ಬಾಲಾಜಿ ಕರೆ ನೀಡಿದರು.
ಮಂಗಳವಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷಾ ಪೂರ್ವ ಮಾರ್ಗದರ್ಶನ ನೀಡಿದ ಅವರು, ಪ್ರತಿ ಕ್ಷಣವೂ ಅಮೂಲ್ಯವಾಗಿದ್ದು, ಓದಲು ಕಿವಿಮಾತು ಹೇಳಿದರು.
ಹೊರಗಿನ ತಿಂಡಿ ತಿನ್ನದೇ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ನಿರಂತರ ಅಭ್ಯಾಸ ಮಾಡಿ ಶೇ.೧೦೦ ಸಾಧನೆಗೆ ಪರಿಶ್ರಮ ಹಾಕಿ ಎಂದು ತಿಳಿಸಿದ ಅವರು, ಬೆಳಗಿನ ಜಾವ ೫ ಗಂಟೆಗೆ ಏಳುವ ಅಭ್ಯಾಸ ಮಾಡಿಕೊಳ್ಳಿ, ಪರೀಕ್ಷೆಗೆ ಇನ್ನು ಕೇವಲ ೧೪ ದಿನವಿದ್ದು, ಅನುಭವಿ ಶಿಕ್ಷಕರು ಪರೀಕ್ಷೆಗೆ ಅತಿ ಮುಖ್ಯವಾದ ಪ್ರಶ್ನೆಗಳನ್ನು ಓದಲು ಮಾರ್ಗದರ್ಶನ ನೀಡುವುದರಿಂದ ಶಾಲೆಗೆ ಗೈರಾಗದಿರಿ ಎಂದು ಸೂಚಿಸಿ, ಏಕಾಗ್ರತೆ ಬರುವಂತಾಗಲು ಹಲವಾರು ಸೂತ್ರಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟರು.
ಪಠ್ಯಪುಸ್ತಕ ಅಭ್ಯಾಸ ಮಾಡಿ ಎಂದ ಅವರು, ತರಗತಿಯಲ್ಲಿ ಶಿಕ್ಷಕರ ಬೋಧನೆ ಸಂದರ್ಭದಲ್ಲಿ ಏಕಾಗ್ರತೆಯಿಂದ ಆಲಿಸಿ, ಪಠ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಯಾವುದೇ ಆತಂಕವಿಲ್ಲದೇ ಶಿಕ್ಷಕರನ್ನು ಕೇಳಿ ಪರಿಹರಿಸಿಕೊಳ್ಳಿ ಎಂದರು.
ರಾತ್ರಿ ೧೦-೩೦ ಗಂಟೆಯವರೆಗೂ ಓದುವ ಅಭ್ಯಾಸ ರೂಢಿಸಿಕೊಳ್ಳಲು ಸಲಹೆ ನೀಡಿದ ಅವರು, ಯಾವುದೇ ಪ್ರಶ್ನೆ ಕುರಿತು ಗೊಂದಲವಿದ್ದರೆ ಯಾವುದೇ ಮುಜುಗರಕ್ಕೆ ಒಳಗಾಗದೇ ನಿಮ್ಮ ಶಿಕ್ಷಕರನ್ನು ಕೇಳಿ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪಠ್ಯ ಪುಸ್ತಕ ಓದುವರಿಂದ ಮಾತ್ರವೇ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಶೇ.೧೦೦ ಅಂಕ ಪಡೆಯಲು ಸಾಧ್ಯ ಎಂದ ಅವರು, ಇಲಾಖೆ ನೀಡಿರುವ ‘ನನ್ನನ್ನೊಮ್ಮೆ ಗಮನಿಸಿ’ ವಿಷಯವಾರು ಅಭ್ಯಾಸ ಪ್ರತಿಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರೆ ಯಾವುದೇ ವಿದ್ಯಾರ್ಥಿ ತೇರ್ಗಡೆಯಾಗುವುದು ಕಷ್ಟವಲ್ಲ, ಆದರೆ, ಪರಿಪೂರ್ಣ ಅಂಕ ಗಳಿಸಬೇಕೆಂಬ ವಿದ್ಯಾರ್ಥಿಗಳು ಪಠ್ಯ ಪುಸ್ತಕವನ್ನು ಆಳವಾಗಿ ಅಭ್ಯಾಸ ಮಾಡಬೇಕೆಂದರು.
ಶಾಲೆಯಲ್ಲಿ ಉತ್ತಮ ಸಂಪನ್ಮೂಲ ಶಿಕ್ಷಕರಿದ್ದು, ಅವರ ನೆರವು ಪಡೆಯಿರಿ, ನಿಮ್ಮ ಗುರಿ ಕೇವಲ ಪರೀಕ್ಷೆ ಆಗಿರಲಿ, ಪರೀಕ್ಷೆ ಮುಗಿಯುವವರೆಗೂ ನಿಮ್ಮ ಉಳಿದೆಲ್ಲಾ ಆಟೋಟ ಇತರೆ ಚಟುವಟಿಕೆಗಳನ್ನು ನಿಯಂತ್ರಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ಹಿರಿಯ ಶಿಕ್ಷಕರಾದ ಸಿದ್ದೇಶ್ವರಿ,ಎಂ.ಆರ್.ಗೋಪಾಲಕೃಷ್ಣ, ಭವಾನಿ,ವೆಂಕಟರೆಡ್ಡಿ, ಶ್ವೇತಾ, ಸುಗುಣಾ,ಲೀಲಾ, ಫರೀದಾ, ಚೈತ್ರ, ಶ್ರೀನಿವಾಸಲು ಮತ್ತಿತರರಿದ್ದರು.