ಶ್ರದ್ಧಾ ಮೈ ಮೇಲೆ ಸುಟ್ಟ ಗಾಯ ಪತ್ತೆ

ನವದೆಹಲಿ, ನ.೨೫- ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ಹತ್ಯೆ ಪ್ರಕರಣದ ತನಿಖೆಯಲ್ಲಿ ಆರೋಪಿ ಅಫ್ತಾಬ್ ಪೂನಾವಾಲಾ ಕೃತ್ಯಗಳು ಒಂದೊಂದೇ ಬಯಲಾಗುತ್ತಿದ್ದು, ಇದೀಗ ಆತ ಸಿಗರೇಟ್ ಸೇದಿ ಶ್ರದ್ಧಾ ಮೈಮೇಲೆ ಸುಟ್ಟಗಾಯಗಳನ್ನು ಮಾಡಿದ್ದ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಆಕೆ ಬದುಕಿರುವಾಗಕೇ ಚಿತ್ರಹಿಂಸೆ ನೀಡಿದ್ದರೂ, ಶ್ರದ್ಧಾ, ಆತನಿಗೆ ಮತ್ತೊಂದು ಅವಕಾಶ ನೀಡಬೇಕೆಂದು ಪೊಲೀಸರನ್ನು ಸಂಪರ್ಕಿಸಲು ನಿರಾಕರಿಸಿದಳು ಎಂದು ಆಕೆಯ ಸ್ನೇಹಿತರೊಬ್ಬರು ಹೇಳಿದ್ದಾರೆ.
ಆಕೆಯ ಕಾಲೇಜು ಸ್ನೇಹಿತ ರಜತ್ ಶುಕ್ಲಾ ಮಾಧ್ಯಮಗಳೊಂದಿಗೆ ಮಾತನಾಡಿ, ೨೦೨೧ ರಲ್ಲಿ ಅಫ್ತಾಬ್ ತನ್ನ ಬೆನ್ನಿನ ಭಾಗವನ್ನು ಸಿಗರೇಟಿನಿಂದ ಸುಟ್ಟುಹಾಕಿದ್ದಾನೆ ಎಂದು ಶ್ರದ್ಧಾ ಅಳಲು ತೋಡಿಕೊಂಡಿದ್ದಳು. ಆನಂತರ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಬೆದರಿಸಿದರೂ ಅಫ್ತಾಬ್ ಕೃತ್ಯ ಮುಂದುವರೆಸಿದ್ದ ಎಂದು ಆರೋಪಿಸಿದರು.
ಚಾಕು ಜಪ್ತಿ: ೩೫ ತುಂಡುಗಳಾಗಿ ಕತ್ತರಿಸಿ ಬಿಸಾಡಿದ್ದ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾನ ಛತರ್‌ಪುರದಲ್ಲಿನ ಫ್ಲ್ಯಾಟ್‌ನಿಂದ ಐದು ಚಾಕುಗಳನ್ನು ದೆಹಲಿ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ.
ಅಪರಾಧ ಕೃತ್ಯಕ್ಕೆ ಇವುಗಳನ್ನು ಬಳಸಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು, ಚಾಕುಗಳನ್ನು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಲಾಗಿದೆ. ಈ ಚಾಕುಗಳನ್ನು ಹತ್ಯೆಗೆ, ದೇಹ ತುಂಡರಿಸಲು ಬಳಸಿದ್ದರೆ ಅದು ಎಫ್‌ಎಸ್‌ಎಲ್ ಪರೀಕ್ಷೆಯಿಂದ ಮಾತ್ರ ದೃಢಪಡಲಿದೆ. ಇದಕ್ಕೆ ಸಮಯ ಬೇಕಾಗಲಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಆರೋಪಿಯು ಶ್ರದ್ಧಾ ದೇಹವನ್ನು ತುಂಡು ತುಂಡಾಗಿ ಕತ್ತರಿಸಲು ಬಳಸಿದ್ದಾನೆ ಎನ್ನಲಾದ ಗರಗಸ ಈವರೆಗೆ ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ: ದಕ್ಷಿಣ ದೆಹಲಿಯ ಮಹ್ರೌಲಿಯ ತನ್ನ ಫ್ಲ್ಯಾಟ್‌ನಲ್ಲಿ ಆಫ್ತಾಬ್ ಅಮೀನ್ ಪೂನಾವಾಲಾ ಕಳೆದ ಮೇನಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದಿದ್ದ. ನಂತರ ಆಕೆಯ ದೇಹವನ್ನು ೩೫ ತುಂಡುಗಳಾಗಿ ಕತ್ತರಿಸಿ, ೩೦೦ ಲೀಟರ್ ಸಾಮರ್ಥ್ಯದ ಫ್ರಿಜ್‌ನಲ್ಲಿ ಸುಮಾರು ಮೂರು ವಾರಗಳವರೆಗೆ ಇರಿಸಿದ್ದ. ನಂತರ ಅವುಗಳನ್ನು ನಗರದ ವಿವಿಧೆಡೆ ಮತ್ತು ಛತರ್‌ಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳವರೆಗೆ ಒಂದೊಂದಾಗಿ ಬಿಸಾಡಿದ್ದ.