
ಅಫಜಲಪುರ:ಜ.11: ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಹಜರತ್ ಖಾಜಾ ಸೈಫನ ಮುಲ್ಕ ಬಂಡಿ ಜಾತ್ರೆ ಸಾವಿರಾರು ಜನ ಭಕ್ತಸಾಗರದ ಮಧ್ಯೆ ಜರುಗಿತು. ಶನಿವಾರ ರಾತ್ರಿ 12-30ಕ್ಕೆ ಕರಜಗಿಯಿಂದ ಗಂಧ ಹಾಗೂ ಗಲಾಫ ಹೊತ್ತುಕೊಂಡು ಬಂದಿದ್ದ ಜೋಡಿ ಎತ್ತುಗಳು ಭಕ್ತರ ಜೈಕಾರ ಮತ್ತು ವಾದ್ಯಗಳ ಮಧ್ಯೆ ಮೆರವಣಿಗೆಯು ಇಡೀ ರಾತ್ರಿ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೈದ್ರಾ ಗ್ರಾಮದ ಹಜರತ್ ಖಾಜಾ ಸೈಫನ ಮುಲ್ಕ ದರ್ಗಾಕ್ಕೆ ಬೆಳಿಗ್ಗೆ ತಲುಪಿದ ನಂತರ ಗಂಧದ ಲೇಪನವನ್ನು ಮಾಡಿಕೊಂಡು ಹೈದ್ರಾದಿಂದ ಹೊರಟು ಮಧ್ಯಾಹ್ನ ಕರಜಗಿ ದರ್ಗಾಗೆ ಭಕ್ತಿಯ ಬಂಡಿ ತಲುಪಿದ ನಂತರ ಸೈಫನ ಮುಲ್ಕ ಕಿ ದೋಸ್ತರಾ ಹೋದಿನ್ ಎಂದು ಭಕ್ತರ ಜೈ ಘೋಷಣೆಗಳು ಮುಗಿಲು ಮುಟ್ಟಿದವು. ಅಪಾರ ಪ್ರಮಾಣದ ಹಿಂದೂ ಮುಸ್ಲಿಂ ಸಮಾಜ ಭಾಂದವರು ಜಾತ್ರೆಯಲ್ಲಿ ಪಾಲ್ಗೊಂಡು ಜಾತ್ರೆಯ ಮೆರಗು ತಂದರು. ಪ್ರಮುಖರಾದ ತಾ.ಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಿಕೇರಿ, ಪೊನ್ನಪ್ಪ ಡಾಲೆ, ಇರ್ಫಾನ ಜಮಾದಾರ, ಚಿದಾನಂದ ತಳವಾರ, ಪತ್ರಕರ್ತ ಬಶೀರಅಹ್ಮದ ಚೌಧರಿ, ರಮೇಶ ಕ್ಷತ್ರಿಯ, ಗಿರಿ ಮಲ್ಲಯ್ಯಾ ಹಿರೀಮಠ, ಖಾಸಿಂ ಚೌಧರಿ, ಉಸ್ಮಾನ ಚೌಧರಿ ಹಾಗೂ ಇತರರಿದ್ದರು.