ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಹಬ್ಬ ಆಚರಣೆ

ಸೈದಾಪುರ:ಜು.22: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಕೋವಿಡ್ ಮಾರ್ಗಸೂಚಿಯಂತೆ ಬುಧವಾರ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಪಟ್ಟಣದ ಜಾಮೀಯ ಮಸೀದಿಯಲ್ಲಿ ಶಾಂತಿ ಸಂಯಮ ಮತ್ತು ಅತ್ಯಂತ ಜಾಗ್ರತೆಯಿಂದ ಕೊರೊನಾ ಭಯದ ನಡುವೆಯು, ಸರ್ಕಾರದ ಆದೇಶದಂತೆ ದೈಹಿಕ ಅಂತರ ಕಾಪಾಡಿಕೊಂಡು, ಶಾಂತ ರೀತಿಯಿಂದ ಆಚರಿಸಿದರು. ಸರ್ಕಾರವು ಜನರಿಗೆ ಹಬ್ಬ ಹರಿದಿನಗಳನ್ನು ಆಚರಿಸಲು ಲಾಕ್ ಡೌನ್ ತೆರವುಗೊಳಿಸಿ ಮುಕ್ತ ಅವಕಾಶ ನೀಡುವುದರ ಜೊತೆಗೆ ಕೆಲವೊಂದು ಕಟ್ಟು ನಿಟ್ಟಿನ ಕ್ರಮಗಳನ್ನು ಪಾಲಿಸುವಂತೆ ಮಾರ್ಗಸೂಚನೆಗಳನ್ನು ನೀಡಿದೆ. ಅದರಂತೆ ಈ ಬಾರಿಯೂ ಮುಸ್ಲಿಂ ಬಾಂಧವರಿಗೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡದ ಹಿನ್ನಲೆಯಲ್ಲಿ ಮಸೀದಿಯಲ್ಲಿಯೇ ದೇಶದ ಜನರ ನಡುವೆ ಶಾಂತಿ ಸೌಹಾರ್ದತೆ ಏರ್ಪಡಲಿ ಎಂದು ಸಾಮೂಹಿಕ ಪಾರ್ಥನೆಯನ್ನು ಸಲ್ಲಿಸಿ ಬಕ್ರೀದ್ ಹಬ್ಬವನ್ನು ಆಚರಿಸಿದರು. ಮಕ್ಕಳು ಮತ್ತು ವಯೋ ವೃದ್ಧ ಮುಸ್ಲಿಂ ಬಾಂಧವರು ಈದ್ಗಾ ಮೈದಾನಕ್ಕೆ ಹಾಗೂ ಮಸೀದಿಯಲ್ಲಿಯೂ ಪ್ರಾರ್ಥನೆಯನ್ನು ಸಲ್ಲಿಸಲು ನಿರ್ಬಂಧವಿರುವುದರಿಂದ ಮನೆಯಲ್ಲಿಯೇ ಬಹಳಷ್ಟು ಮುಸ್ಲಿಂರು ಪ್ರಾರ್ಥನೆಯನ್ನು ಮಾಡಿ ದೇವರ ಕೃಪೆಗೆ ಪಾತ್ರರಾದರು. ಸರ್ಕಾರದ ಆದೇಶದಂತೆ ಪ್ರಾರ್ಥನೆ ಸ್ಥಳದಲ್ಲಿ ಪ್ರತಿಯೊಬ್ಬರು ಕೂಡ ಮಾಸ್ಕನ್ನು ಕಡ್ಡಾಯವಾಗಿ ಹಾಕಿಕೊಂಡು, ಪ್ರತಿಯೊಬ್ಬರ ನಡುವೆ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಂಡು, ಅಲ್ಲದೇ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯೆಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿ ಪ್ರಾರ್ಥನೆ ಮಾಡಿದರು. ಮಸೀದಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲು ಇಚ್ಚಿಸಿದವರು ಮಸೀದಿಯನ್ನು ಪ್ರವೇಶಿಸುವ ಮುನ್ನ ಮೊದಲು ದೇಹದ ತಾಪಮಾನವನ್ನು ತಪಾಸಣೆ ಮಾಡಿಕೊಂಡು, ಕೈಗಳನ್ನು ಸೋಪು, ಸ್ಯಾನಿಟೈಸರ್‍ದಿಂದ ಶುಚಿಗೊಳಿಸಿಕೊಂಡು ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಸೀದಿಯಲ್ಲಿ ಹಸ್ತ ಲಾಘವ ಮತ್ತು ಆಲಿಂಗನವಿಲ್ಲದೇ ಕೇವಲ ದೂರದಿಂದ ಭೇಟಿಯಾಗಿ ಪ್ರಾರ್ಥನೆಯನ್ನು ಸಲ್ಲಿಸಿ ಮನೆಗೆ ಮರಳಿದರು.