
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.04: ಜೈನ್ ಧರ್ಮದ 24ನೇ ತೀರ್ಥಂಕರ ಭಗವಾನ್ ಮಹಾವೀರರ 2622ನೇ ಜನ್ಮ ಕಲ್ಯಾಣ ದಿನಾಚರಣೆ ನಗರದ ತೇರು ಬೀದಿಯ ಪಾರ್ಶ್ವನಾಥ ಜೈನ್ ಶ್ವೇತಂಬರ ದೇವಸ್ಥಾನ, ಸಭಾಂಗಣದಲ್ಲಿ ಇಂದು ಶ್ರದ್ಧಾ ಭಕ್ತಿಯಿಂದ ನಡೆಸಲಾಯ್ತು.
ಬೆಳಿಗ್ಗೆ ಮಹಾವೀರರ ವಿಗ್ರಹಕ್ಕೆ ವಿಶೇಷ ಅಭಿಷೇಕ ಪೂಜಾ ಕೈಂಕರ್ಯಗಳು ನಂತರ ನಗರದ ಪ್ರಮುಖ ಬೀದಿಗಳಲ್ಲಿ ತೀರ್ಥಂಕರ ಮೆರವಣಿಗೆ ನಡೆಯಿತು.
ಮಹಿಳೆಯರು ಮಕ್ಕಳು ಭಜನೆ ಮಾಡುತ್ತ, ಕೋಲಾಟ ಮೊದಲಾದ ಕಲಾತಂಡಗಳಿಂದ ನೃತ್ಯ ಮಾಡುತ್ತ ಹಾರ್ಧಿಕವಾಗಿ ಮೆರವಣಿಗೆ ನಡೆಯಿತು.
ನಂತರ ಸಭಾಂಗಣದಲ್ಲಿ ಮಕ್ಕಳು, ಯುವಕ-ಯುವತಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.
ಸಮಾರಂಭದಲ್ಲಿ ಜೈನ್ ಸಮುದಾಯದ ಮುಖಂಡರುಗಳಾದ ಉತ್ಸವ ಲಾಲ್ ಜೈನ್, ಸೂರಜ್ ಮಲ್ ಜೈನ್, ರೋಷನ್ ಜೈನ್, ವಿನೋದ್ ಬಾಗ್ರೇಚ್, ಗೌತಮ್, ರಾಜಮಲ್ ಜೈನ್, ಮೊದಲಾದವರು ಮಹಿಳಾ, ಯುವಕ ಮಂಡಳಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ರೋಟಿ ಘರ್ ನಲ್ಲಿ ರೊಟಿ ತಯಾರಿಸುವ ಯಂತ್ರವನ್ನು ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಉದ್ಘಾಟಿಸಿದರು. ಈ ಯಂತ್ರ ಗಂಟೆಗೆ 500 ರೊಟ್ಟಿಗಳನ್ನು ತಯಾರಿಸಲಿದೆ.