ಶ್ರದ್ಧಾ ಭಕ್ತಿಯಿಂದ ಕೋಲಾರದಲ್ಲಿ ಹನುಮ ಜಯಂತಿ ಆಚರಣೆ

ಕೋಲಾರ,ಡಿ.೨೮:ಕೋಲಾರ ತಾಲೂಕಿನ ಪುರಾಣ ಪ್ರಸಿದ್ದ ಆಲಂಬಗಿರಿ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಶ್ರದ್ಧಾಭಕ್ತಿಗಳಿಂದ ಪೂಜೆಗಳನ್ನು ಆಚರಿಸಲಾಯಿತು. ಆಂಜನೇಯಸ್ವಾಮಿಗೆ ವಿಶೇಷವಾಗಿ ಒಣಹಣ್ಣುಗಳಿಂದ ಅಲಂಕಾರವನ್ನು ಮಾಡಲಾಗಿತ್ತು. ಅಲಂಕಾರಕ್ಕಾಗಿ ಹಲವಾರು ಹಣ್ಣುಗಳನ್ನು ಬಳಸಿಕೊಳ್ಳಲಾಗಿತ್ತು. ಗೋಡಂಬಿ, ದ್ರಾಕ್ಷಿ, ಖರ್ಜೂರ, ಅಂಜೂರ, ಬಾದಾಮಿ ಮುಂತಾದ ಒಣಹಣ್ಣುಗಳಿಂದ ಅಲಂಕರಿಸಲಾಗಿತ್ತು. ಪ್ರತಿ ವರ್ಷವೂ ಒಂದಿಲ್ಲೊಂದು ವಿಶೇಷ ಅಲಂಕಾರವನ್ನು ಮಾಡಿಕೊಂಡು ಬರುವುದು ರೂಢಿಯಲ್ಲಿದೆ.
ಬೆಳಗಿನಿಂದಲೇ ಸುತ್ತಮುತ್ತಲಿನ ಗ್ರಾಮಸ್ಥರು ಈ ಹನುಮಜಯಂತಿ ಪ್ರಯುಕ್ತ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಮಾಡಿಸುತ್ತಿದ್ದರು. ದರ್ಶನಕ್ಕೆ ಬಂದ ಭಕ್ತರಿಗೆ ಶ್ರೀ ಯೋಗಿನಾರೇಯಣ ಮಠದ ವತಿಯಿಂದ ಪ್ರಸಾದ ವಿನಿಯೋಗದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಹನುಮ ಜಯಂತಿ ಪ್ರಯುಕ್ತ ಗ್ರಾಮಸ್ಥರಿಂದ ಸಂಕೀರ್ತನೆಯನ್ನು ಏರ್ಪಡಿಸಲಾಗಿತ್ತು. ವಿದ್ಯುತ್ ದೀಪಗಳಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು. ಅಧಿಕ ಸಂಖ್ಯೆಯಲ್ಲಿ ಭಕ್ತರು ಬಂದು ರಾಮದೂತನ ದರ್ಶನವನ್ನು ಪಡೆದು ಪುನೀತರಾದರು.