ಶ್ರದ್ಧಾಭಕ್ತಿ ಸಂಭ್ರಮದಿಂದ ಜರುಗಿದ ಸರ್ವಧರ್ಮ ಸಮನ್ವಯ ರಥೋತ್ಸವ


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ15: ಸ್ಥಳೀಯ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸರ್ವಧರ್ಮ ಸಮನ್ವಯ ಮಹಾರಥೋತ್ಸವ ಮಂಗಳವಾರ ಸಂಜೆ ಶ್ರದ್ಧಾಭಕ್ತಿ ಸಂಭ್ರಮ-ಸಡಗರದಿಂದ ನಡೆಯಿತು.
ಕುದರೆಮೋತಿಯ ಶ್ರೀ ಜಗದ್ಗುರು ವಿಜಯಮಾಹಾಂತೇಶ್ವರ  ಸಂಸ್ಥಾನಮಠದ ನಿರಂಜನ ಜಗದ್ಗುರು ವಿಜಯಮಹಾಂತ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀಮಠದಿಂದ ಆರಂಭವಾದ ರಥೋತ್ಸವವು ನಗರ ಪಾದಗಟ್ಟೆ ಆಂಜನೇಯ ದೇವಸ್ಥಾನದ ವರೆಗೆ ತೆರಳಿ, ಮರಳಿ ಶ್ರೀ ಮಠದ ಆವರಣಕ್ಕೆ ಆಗಮಿಸಿ, ಸರ್ವಧರ್ಮದ ಸಮನ್ವಯತೆಯ ಸಂದೇಶ ಸಾರಿತು.
ವಿಶ್ವವಿಖ್ಯಾತ ವಿಜಯನಗರ ಸಾಮ್ರಾಜ್ಯದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವವಾದ ಇತಿಹಾಸವನ್ನು ನಿರ್ಮಿಸಿದ ಐದು ನೂರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠವು ಸರ್ವಧರ್ಮದವರಲ್ಲಿ ಸಾಮರಸ್ಯ ಮತ್ತು ಸದ್ಭಾವನೆ ಮೂಡಲೆಂದು ಸರ್ವಧರ್ಮ ಸಮನ್ವಯತೆ ಜಗತ್ತಿಗೆ ಸಾರಿದ ಶ್ರೀಮಠದ ಹತ್ತೊಂಬತ್ತನೇ ಜಗದ್ಗುರುಗಳಾದ ಲಿಂ, ಪೂಜಶ್ರಿ ಡಾ.ಸಂಗನಬಸವ ಮಹಾಸ್ವಾಮಿಗಳವರು ಮಹಾರಥೋತ್ಸವಕ್ಕೆ ಚಾಲನೆ ನೀಡಿದ್ದರು. ಸಹಸ್ರಾರು ಭಕ್ತರು ಸಾಕ್ಷಿಯಾದರು.
ಸಿದ್ದಲಿಂಗ ಮಹಾಸ್ವಾಮಿಗಳು, ಗುರುಬಸವ ಮಹಾಸ್ವಾಮಿಗಳು, ಪ್ರಭುನೀಲಕಂಠ ಮಹಾಸ್ವಾಮಿಗಳು, ಶಿವಲಿಂಗ ಮಹಾಸ್ವಾಮಿಗಳು, ಸದಾಶಿವ ಮಹಾಸ್ವಾಮಿಗಳು, ಬಸವಲಿಂಗ ಮಹಾಸ್ವಾಮಿಗಳು, ತೋಂಟದಾರ್ಯ ಮಹಾಸ್ವಾಮಿಗಳು, ನಿರಂಜನ ದೇವರು, ಶಿವ ಬಸವ ದೇವರು ಸೇರಿದಂತೆ ಸ್ಥಳೀಯ ಗಣ್ಯರು ಪಾಲ್ಗೊಂಡಿದ್ದರು.
ಜಾನಪದ ಗೀತ ಸಂಭ್ರಮ:
ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸುವ ಕೆಲಸವಾಗಬೇಕಿದ್ದು, ಮಠಮಾನ್ಯಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಜಗದ್ಗುರು ಶ್ರೀ ಕೊಟ್ಟೂರು ಸ್ವಾಮಿ ಮಠದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಾನಪದ ಗೀತ ಸಂಭ್ರಮ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಪಾಲಕರು ಅರಿವು ಮೂಡಿಸಬೇಕೆಂದು ತಿಳಿಸಿದರು. ಸಣ್ಣ ವಯಸ್ಸಿನಲ್ಲಿ ನಮ್ಮ ಧರ್ಮದ ಬಗ್ಗೆ ತಿಳಿದಿಕೊಂಡರೇ, ಯುಕ್ತ ವಯಸ್ಸಿನಲ್ಲಿ ಅವರೇ ನಮ್ಮ ಧರ್ಮವನ್ನು ಸಂರಕ್ಷಣೆ ಮಾಡಬಲ್ಲರೆಂದು ತಿಳಿ ಹೇಳಿದರು. ಜನರಲ್ಲಿ ಧರ್ಮ ಜಾಗೃತಿ ಕಲ್ಪಿಸುವಲ್ಲಿ ಮಠ ತನ್ನದೇ ಆದ ಕರ್ತವ್ಯವನ್ನು ಮಾಡುತ್ತಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಶ್ರೀಶೈಲ ಹುದ್ದಾರ ನೇತೃತ್ವದ ಕಲಾತಂಡ ನಡೆಸಿಕೊಟ್ಟ ಜಾನಪದಗೀತ ಸಂಭ್ರಮ ನೆರೆದ ಜನರನ್ನು ಆಕರ್ಷಿಸಿತು. ಮರಿಯಮ್ಮನ ಹಳ್ಳಿ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ, ಇನ್ನಿತರ ಮಠಗಳ ಮಹಾಸ್ವಾಮಿಗಳು, ಪ್ರಮುಖರಾದ ಕೆ.ಕೊಟ್ರೇಶ್, ರಾಜಶೇಖರ ಹಿಟ್ನಾಳು, ವಿಶ್ವನಾಥ ಹಿರೇಮಠ, ಭೂಪಾಳ ರಾಘವೇಂದ್ರ ಶೆಟ್ಟಿ, ಕೆ.ಎಂ.ಹೇಮಯ್ಯ ಸ್ವಾಮಿ,  ಅಸುಂಡಿ ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.