ಶ್ರದ್ದೆಯಿಂದ ಓದುವುದರೊಂದಿಗೆ ಜ್ಞಾನ ಸಂಪಾದನೆಗೆ ಒತ್ತು ನೀಡಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.12:- ವಿದ್ಯಾರ್ಥಿ ಬದುಕಿನಲ್ಲಿ ಪಿಯು ಶಿಕ್ಷಣ ಮಹತ್ತರ ಘಟ್ಟವಾಗಿದ್ದು ಶ್ರದ್ದೆಯಿಂದ ಓದುವುದರೊಂದಿಗೆ ಜ್ಞಾನ ಸಂಪಾದನೆಗೆ ಒತ್ತು ನೀಡುವಂತೆ ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಹೇಳಿದರು.
ಅವರು ಪಟ್ಟಣದ ಗ್ರಾಮಭಾರತಿ ವಿದ್ಯಾಸಂಸ್ಥೆಯಲ್ಲಿ ಎಸ್.ಎಂ.ಲಿಂಗಪ್ಪ ಮತ್ತು ಎಸ್.ಎಸ್.ಕೆ.ಸಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡಿದರು. ಜ್ಞಾನ ಎಂಬುದು ವಿಶಾಲವಾಗಿದ್ದು ಯಾರೂ ಕದಿಯಲಾಗದ, ದೋಚಲಾಗದ ವಸ್ತುವಾಗಿದೆ. ಅದನ್ನು ಪಡೆಯಲು ಕಠಿಣ ಶ್ರಮ ಮತ್ತು ಸತತ ಅಧ್ಯಯನ ಅತೀ ಮುಖ್ಯ ಯಾರು ಅಧ್ಯಯನಕ್ಕೆ ಆದ್ಯತೆ ನೀಡುವರೋ ಬದುಕಿನಲ್ಲಿಯೂ ಯಶಸ್ಸು ಗಳಿಸಲು ಸಾಧ್ಯ. ಪ್ರಯತ್ನಗಳು ನಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತದೆ ಆಲೋಚನೆಗಳು ಉದಾತ್ತವಾದಾಗ ಮಾತ್ರ ಫಲಿತಾಂಶವು ಉದಾತ್ತವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಎರಡು ವರ್ಷದ ಪಿಯು ವ್ಯಾಸಂಗದಲ್ಲಿ ಅಧ್ಯಯನಕ್ಕೆ ಹೆಚ್ಚು ಗಮನಹರಿಸಿದರೆ ಮುಂದೆ ನಿಮ್ಮ ಕಲಿಕೆಯೇ ನಿಮ್ಮ ದಾರಿಯನ್ನು ನಿರ್ಧರಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್. ಸಿ. ಕಿರಣ್ ಕುಮಾರ್ ಮಾತನಾಡಿ ಗ್ರಾಮಭಾರತಿ ವಿದ್ಯಾಸಂಸ್ಥೆ ತಾಲ್ಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಶಿಸ್ತಿಗೆ ಹೆಸರಾಗಿದೆ ಪ್ರತಿ ವರ್ಷ ಉತ್ತಮ ಫಲಿತಾಂಶ ದಾಖಲಿಸಿದೆ. ಕಾಲೇಜಿನಲ್ಲಿ ಶ್ರದ್ದೆಯಿಂದ ಕಲಿಯುವ ವಾತವರಣವನ್ನು ಕಲ್ಪಿಸಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ವಿದ್ಯಾಸಂಸ್ಥೆಗೆ ಹೆಸರು ತರಬೇಕೆಂದು ಮನವಿ ಮಾಡಿದರು. ಎಸ್.ಎಮ್.ಲಿಂಗಪ್ಪ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಪಿ.ಸುರೇಶ್ ಮಾತನಾಡಿ ಸತತ ಶ್ರಮ ಮತ್ತು ಅಧ್ಯಯನದಿಂದ ಯೋಗ್ಯತೆ ನಿಮ್ಮದಾಗುತ್ತದೆ. ಆ ಯೋಗ್ಯತೆ ನಿಮಗೆ ಯೋಗ ತಂದುಕೊಡುತ್ತದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ಪುಟ್ಟಲಕ್ಷಮ್ಮ ಉದ್ಘಾಟಿಸಿದರು. ಎರಡೂ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಂ.ಕುಮಾರ್ ಮತ್ತು ಬಿ.ಎಸ್.ರಘುಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು ಗ್ರಾಮಭಾರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಚ್.ಎಸ್.ಕೃಷ್ಣ ,ಮುಖ್ಯ ಶಿಕ್ಷಕರುಗಳಾದ ಎಂ.ಜೆ.ಮಂಜುನಾಥ್, ಎಸ್.ವಿ.ಜಯಶ್ರೀ , ಎಸ್.ಬಿ.ರೂಪಾ, ಮತ್ತು ಸಂಸ್ಥೆಯ ವಿವಿಧ ವಿಭಾಗದ ಶಿಕ್ಷಕರು ಸಿಬ್ಬಂದಿ, ಆಡಳಿತ ಮಂಡಳಿಯ ನಿರ್ದೇಶಕರುಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರಿಕ್ಷೆ ಯಲ್ಲಿ ಅತ್ಯಧಿಕ ಅಂಕ ತೆಗೆದ ಕಾಲೇಜಿನ ಮೂರು ವಿಭಾಗದ ವಿದ್ಯಾರ್ಥಿಗಳಾದ ವಿಜ್ಞಾನ ವಿಭಾಗದ ಶುಭಶ್ರೀ (562) ಕಲಾ ವಿಭಾಗದ ವಿ.ಎಸ್.ಚೇತನಾ (522) ವಾಣೀಜ್ಯ ವಿಭಾಗದ ಎ.ಎಚ್.ಸಿಂಚನಾ( 535) ಅವರುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.