ಶ್ರದ್ದಾಪೂರ್ವಕವಾಗಿ, ಪ್ರಜ್ಞಾಪೂರ್ವಕವಾಗಿ ಮತ್ತು ರಚನಾತ್ಮಕವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು: ಬಾಗೇವಾಡಿ

ವಿಜಯಪುರ, ಏ.3: ನಮ್ಮನ್ನು ನಾವು ಹೆಚ್ಚು ಶ್ರದ್ದಾಪೂರ್ವಕವಾಗಿ, ಪ್ರಜ್ಞಾಪೂರ್ವಕವಾಗಿ, ರಚನಾತ್ಮಕವಾಗಿ ಮತ್ತು ನಿಷ್ಠಾಪೂರಕವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ನಿವೃತ್ತ ಪೊಲೀಸ್ ನಿರೀಕ್ಷಕ ಸಿ.ಬಿ ಬಾಗೇವಾಡಿ ಅವರು ಹೇಳಿದರು. ಅವರು ನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ, ವಿಜಯಪುರ ಜಿಲ್ಲಾ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದರು.
ಈ ದಿನವು ನಮ್ಮ ಸಂಕಲ್ಪ ದೃಢಪಡಿಸುವುದರ ಜೊತೆಗೆ, ಪೊಲೀಸ್ ಪಡೆಗಳ ಧೈರ್ಯ, ಶೌರ್ಯ ಮತ್ತು ಸ್ಥೈರ್ಯ ಮತ್ತು ಸಮರ್ಪಿತ ಮನೋಭಾವವನ್ನು ಪುರಸ್ಕರಿಸಿ ಗೌರವಿಸುವ ದಿನವಾಗಿದೆ. ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಶಾಂತಿ ಪಾಲನೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಕೋವಿಡ್ 19ರ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಅವಿರತವಾಗಿ ಶ್ರಮ ಪಟ್ಟಿದ್ದೇವೆ. ನೊಂದವರ ಪಾಲಿಗೆ ಭರವಸೆಯನ್ನು ಹುಟ್ಟು ಹಾಕಿ, ನಿಮ್ಮೊಂದಿಗೆ ನಾವಿದ್ದೇವೆ ಎಂಬುದನ್ನು ಪೊಲೀಸ್ರ ಧ್ಯೇಯವಾಗಿದೆ.ಪೊಲೀಸ್ ಅಧಿಕಾರಿ ಸಿಬ್ಬಂದಿ ಹಾಗೂ ಅವರ ಕುಟುಂಬಕ್ಕೆ ಪೊಲೀಸ್ ಕಲ್ಯಾಣ ಕಾರ್ಯಕ್ರಮದ ಮೂಲಕ ಪೊಲೀಸರ ಮತ್ತು ಅವರ ಅವಲಂಬಿತರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪೊಲೀಸ್ ಕಲ್ಯಾಣ ನಿಧಿಯಡಿ ವಂತಿಕೆ ಸಂಗ್ರಹಿಸಿ, ಈ ನಿಧಿಯನ್ನು ಕಾಲಕಾಲಕ್ಕೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ. ಮುಖ್ಯವಾಗಿ ವೈದ್ಯಕೀಯ ಸಹಾಯಧನ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ವಿಜಯಮಾಂತೇಶ ದಾನಮ್ಮನವರು ಮಾತನಾಡಿ, ಪೊಲೀಸರು ಹಗಲು-ರಾತ್ರಿ ಲೆಕ್ಕಿಸದೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅವರ ಸೇವೆ ಅನನ್ಯವಾಗಿದೆ. ಸಾರ್ವಜನಿಕರು ಶಾಂತಿ ನೆಮ್ಮದಿಯಿಂದ ಜೀವನ ನಡೆಸಲು ಪೊಲೀಸರ ಶ್ರಮವಿದೆ. ವಿಜಯಪುರದ ಪೊಲೀಸರು ಹಲವಾರು ಪ್ರಕರಣಗಳನ್ನು ಭೇದಿಸಿ,ತಾರ್ಕಿಕ ಅಂತ್ಯಗೊಳಿಸಿದ್ದಾರೆ. ವಿಪತ್ತು, ಕೋವಿಡ್ ಸಂದರ್ಭವನ್ನು ಸಪರ್ಪಕವಾಗಿ ನಿರ್ವಹಿಸಿದ್ದಾರೆ. ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚೆಕ್ ಫೊಸ್ಟ್ಗಳಲ್ಲಿ ವಾಹನ ತಪಾಸಣೆ ಮಾಡಿ, ಅಕ್ರಮ ವಸ್ತುಗಳನ್ನು ವಶಕ್ಕೆ ಪಡೆಯುಲ್ಲಿ ಪೊಲೀಸ್ ಇಲಾಖೆ ಪಾತ್ರ ಬಹುಮುಖ್ಯವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ ಡಿ ಆನಂದ್ ಕುಮಾರ್ ಅವರು ವರದಿ ವಾಚನ ಮಾಡಿ ಮಾತನಾಡಿ, ಪೊಲೀಸ್ ಧ್ವಜ ದಿನಾಚರಣೆ ಹಾಗೂ ಪೊಲೀಸ್ ಕಲ್ಯಾಣ ದಿನಾಚರಣೆ ಒಟ್ಟಾಗಿ ಆಚರಿಸಲಾಗುತ್ತಿದೆ. ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಪೊಲೀಸರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಪೊಲೀಸ್ ಕಲ್ಯಾಣ ನಿಧಿಯಡಿ ವಂತಿಕೆ ಸಂಗ್ರಹಿಸುತ್ತಿದ್ದು ಈ ನಿಧಿಯನ್ನು ಕಾಲಕಾಲಕ್ಕೆ ಪೊಲೀಸ್ ಸಿಬ್ಬಂದಿ ಅವರಿಗೆ ಬಳಸಲಾಗುತ್ತಿದೆ. ಆರ್ಥಿಕ ವರ್ಷ 2022 23ನೇ ಸಾಲಿನಲ್ಲಿ ಪೊಲೀಸ್ ಕಲ್ಯಾಣ ನಿಧಿಯಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಧನ ಸಹಾಯ ಒದಗಿಸಿದೆ. ವಿದ್ಯಾಭ್ಯಾಸಕ್ಕಾಗಿ ,ಪೊಲೀಸರ ಕುಟುಂಬ ಹಾಗೂ ಅವರ ಅವಲಂಬಿತ ತಂದೆ ತಾಯಿಯ ಆರೋಗ್ಯ ಭಾಗ್ಯ ಯೋಜನೆಯಡಿ ವೈದ್ಯಕೀಯ ಚಿಕಿತ್ಸಾ ಸೇವೆಯೂ ಒದಗಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂದೆ ಅವರು ಮಾತನಾಡಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಉಪಸ್ಥಿತರಿದ್ದರು.
ಆಕರ್ಷಕ ಪಥಸಂಚಲನ: ಪರೇಡ್ ಕಮಾಂಡರ್ ಡಿ.ಎಸ್.ಶಿವಕುಮಾರ್ ನೇತೃತ್ವದಲ್ಲಿ ಪರೇಡ್ ನಡೆಯಿತು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್ ಎಸ್ ಐ ಶ್ರೀ ರಂಗಪ್ಪ, ವಿಜಯಪುರ ನಗರದ ತಂಡದ ರಾಮು ಝಂಡೆ, ವಿಜಯಪುರ ಗ್ರಾಮೀಣ ವಲಯದ ತಂಡದ ಪಿಎಸ್ ಐ ಅರವಿಂದ ಅಂಗಡಿ, ಇಂಡಿ ವಲಯದಿಂದ ರಾಜು ಪೂಜಾರಿ ,ಬಸವನಬಾಗೇವಾಡಿ ತಂಡದ ಆರ್ ಎಸ್ ಐ,ದಾನೇಶ ಕಲ್ಯಾಣಿ, ಆದರ್ಶ ನಗರ ಪೊಲೀಸ್ ಠಾಣೆಯ ಪಿಎಸ್ ಐ ಸುಷ್ಮಾ ಬಿ ನಂದಗೋಳ, ಐ ಆರ್ ಬಿ ಕೆಪಿ ಖ್ಯಾಡದ ಅವರ ತಂಡಗಳು ಆಕರ್ಷಕವಾಗಿ ತೀವ್ರಗತಿಯ ಮತ್ತು ನಿಧಾನಗತಿಯ ಪಥ ಸಂಚಲನ ನಡೆಸಿದವು.
ಕಾರ್ಯಕ್ರಮಕದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ ಅಧಿಕಾರಿಗಳು ಸಿಬ್ಬಂದಿ ಸಾರ್ವಜನಿಕರು ಭಾಗವಹಿಸಿದ್ದರು.